
ಇಂಡಿಯನ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿ ಸಂಘಟಿಸಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನಲ್ ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಎಸೆದ ಶಮಿ ನೀಡಿದ್ದು ಕೇವಲ 9 ರನ್ಗಳು ಮಾತ್ರ. ಇದರ ನಡುವೆ 2 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.
ವಿಶೇಷ ಎಂದರೆ ಮೊಹಮ್ಮದ್ ಶಮಿ ತಮ್ಮ 24 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಂಡಿಲ್ಲ. ಅಂದರೆ ಶಮಿ ಓವರ್ನಲ್ಲಿ ಫೋರ್ ಅಥವಾ ಸಿಕ್ಸ್ ಬಾರಿಸಲು ಎಸ್ಆರ್ಹೆಚ್ ತಂಡದ ಯಾವುದೇ ಬ್ಯಾಟರ್ಗೆ ಸಾಧ್ಯವಾಗಿಲ್ಲ.
ಇನ್ನು ಇಪ್ಪತ್ತನಾಲ್ಕು ಎಸೆತಗಳಲ್ಲಿ ಶಮಿ ಬರೋಬ್ಬರಿ 18 ಎಸೆತಗಳನ್ನು ಡಾಟ್ ಮಾಡಿದ್ದರು ಎಂಬುದು ಮತ್ತೊಂದು ವಿಶೇಷ. ಈ ಮೂಲಕ ಕರಾರುವಾಕ್ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಶಮಿ ಎಲ್ಲರನ್ನು ಚಕಿತಗೊಳಿಸಿದ್ದಾರೆ.
ಮೊಹಮ್ಮದ್ ಶಮಿಯ ಈ ಮಾರಕ ದಾಳಿಗೆ ಕಂಗೆಟ್ಟ ಸನ್ರೈಸರ್ಸ್ ಹೈದರಾಬಾದ್ ತಂಡವು ಈ ಪಂದ್ಯದಲ್ಲಿ 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 156 ರನ್ಗಳು ಮಾತ್ರ. ಈ ಗುರಿಯನ್ನು 19.5 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ವಿಕೆಟ್ಗಳ ಜಯ ಸಾಧಿಸಿದೆ.