ಶಬರಿಮಲೆ ಪ್ರವೇಶ ಪ್ರಕರಣ; ಮಹಿಳೆಯನ್ನು 3 ದಿನದವರೆಗೆ ಅಸ್ಪೃಶ್ಯಳೆಂದು ಪರಿಗಣಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ಶಬರಿಮಲೆ ಪ್ರವೇಶ ಪ್ರಕರಣ; ಮಹಿಳೆಯನ್ನು 3 ದಿನದವರೆಗೆ ಅಸ್ಪೃಶ್ಯಳೆಂದು ಪರಿಗಣಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ನವದೆಹಲಿ, ಏಪ್ರಿಲ್ 7: ಮಹಿಳೆಯನ್ನು ಒಂದು ತಿಂಗಳಲ್ಲಿ 3 ದಿನಗಳವರೆಗೆ ‘ಅಸ್ಪೃಶ್ಯಳು’ ಎಂದು ಪರಿಗಣಿಸುವಂತಿಲ್ಲ. ಒಂದುವೇಳೆ ಆಕೆಯನ್ನು ಹಾಗೆ ಪರಿಗಣಿಸುವುದಾದರೆ ನಾಲ್ಕನೇ ದಿನದಿಂದ ಹೇಗೆ ಆಕೆಯನ್ನು ಅಸ್ಪೃಶ್ಯಳು ಎಂದು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿ ಬಿ.ವಿ. ನಾಗರತ್ನ ಪ್ರಶ್ನಿಸಿದ್ದಾರೆ. ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ನಂಬಿಕೆಗಳನ್ನು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯ ಕುರಿತು 9 ನ್ಯಾಯಾಧೀಶರ ಪೀಠವು ಇಂದಿನಿಂದ ವಿಚಾರಣೆ ನಡೆಸುತ್ತಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸಂವಿಧಾನ ಪೀಠವು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್, ಬಿ.ವಿ. ನಾಗರತ್ನ, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಳೆ, ಆರ್. ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರೊಂದಿಗೆ ಸೇರಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಲಿಂಗ ಸಮಾನತೆಯನ್ನು ಅನ್ವೇಷಿಸುವ ಹಲವಾರು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

2018ರಲ್ಲಿ ಶಬರಿಮಲೆ ಪ್ರಕರಣದ ತೀರ್ಪನ್ನು ಪ್ರಕಟಿಸಲಾಗಿತ್ತು. ಈ ವಿಚಾರಣೆಯ ಸಮಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2018ರ ಶಬರಿಮಲೆ ತೀರ್ಪಿನಲ್ಲಿ 10-50 ವರ್ಷ ವಯಸ್ಸಿನ ಮಹಿಳೆಯರನ್ನು ದೇವಸ್ಥಾನದಿಂದ ಹೊರಗಿಡುವುದು ‘ಅಸ್ಪೃಶ್ಯತೆಯ’ ಒಂದು ರೂಪವಾಗಿದ್ದು, ಇದು ಸಂವಿಧಾನದ 17ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂಬ ಅಭಿಪ್ರಾಯಕ್ಕೆ ಬಲವಾದ ಆಕ್ಷೇಪಣೆ ಇದೆ ಎಂದು ಹೇಳಿದರು.

ದೇವಾಲಯದಿಂದ ಕೆಲವು ಮಹಿಳೆಯರನ್ನು ಹೊರಗಿಡುವುದು ಆರ್ಟಿಕಲ್ 17ರ ಅಡಿಯಲ್ಲಿ “ಅಸ್ಪೃಶ್ಯತೆ” ಎಂದು ಹೇಳಿದ್ದ ಆಗಿನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ 2018ರ ವೀಕ್ಷಣೆಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬಲವಾಗಿ ವಿರೋಧಿಸಿದರು. ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ತುಷಾರ್ ಮೆಹ್ತಾ, ಶಬರಿಮಲೆ ನಿರ್ಬಂಧವು ಕೇವಲ ವಯಸ್ಸಿನ ಆಧಾರದ ಮೇಲೆಯೇ ಹೊರತು ಮುಟ್ಟಿನ ಆಧಾರದ ಮೇಲೆ ಅಲ್ಲ ಎಂದು ಹೇಳಿದರು.

ಇದನ್ನೂ ಓದಿ: ಮುಟ್ಟಾಗುವ ಹೆಣ್ಣುಮಕ್ಕಳು ಶಬರಿಮಲೆಗೆ ಹೋಗಬಹುದೇ? ಸುಪ್ರೀಂನಲ್ಲಿ ಮರುಪರಿಶೀಲನಾ ಅರ್ಜಿ ವಿಚಾರಣೆ ಶುರು

“ಶಬರಿಮಲೆ ಒಂದು ನಿರ್ದಿಷ್ಟ ವಯಸ್ಸಿನ ಗುಂಪಿಗೆ ಮಾತ್ರ ಸಂಬಂಧಿಸಿದೆ. ಈ ಬಗ್ಗೆ ಯಾವುದೇ ಗೊಂದಲ ಇರಬಾರದು. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಭಗವಾನ್ ಅಯ್ಯಪ್ಪನ ದೇವಾಲಯಗಳು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಮುಕ್ತವಾಗಿವೆ. ಈ ನಿರ್ಬಂಧವನ್ನು ಹೊಂದಿರುವ ಏಕೈಕ ದೇವಾಲಯ ಶಬರಿಮಲೆ”ಎಂದು ಅವರು ಹೇಳಿದ್ದಾರೆ.

2018ರಲ್ಲಿ 5 ನ್ಯಾಯಾಧೀಶರ ಪೀಠವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸುವ ನಿಷೇಧವನ್ನು ತೆಗೆದುಹಾಕಿತ್ತು. ಅದಾದ ಒಂದು ವರ್ಷದ ನಂತರ ವಿವಿಧ ಪೂಜಾ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಸಂಬಂಧಿಸಿದ ಕಾಳಜಿಗಳನ್ನು ಪರಿಶೀಲಿಸಲು ಈ ಪ್ರಕರಣವನ್ನು ಸುಪ್ರೀಂ ಕೋರ್ಟ್​ನ ಪೀಠಕ್ಕೆ ಉಲ್ಲೇಖಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *