
ಬಳ್ಳಾರಿ, ಏಪ್ರಿಲ್ 8: ಗಣಿನಾಡು ಬಳ್ಳಾರಿಯಲ್ಲಿ (Ballari) ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ (Lokayukta Raid) ಮುಂದುವರಿದಿದೆ. ಏಪ್ರಿಲ್ 7ರ ಮಂಗಳವಾರ ಬೆಳ್ಳಂಬೆಳಿಗ್ಗೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಅಕ್ರಮದ ಜಾಲವನ್ನು ಬಯಲಿಗೆಳೆದಿದ್ದಾರೆ.
ಶಿವಣ್ಣ ಕಳೆದ ಹತ್ತು ವರ್ಷಗಳಿಂದ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಹತ್ತಕ್ಕೂ ಹೆಚ್ಚು ಭ್ರಷ್ಟಾಚಾರದ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು. ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ಅವರ ನಿವಾಸ, ಕಚೇರಿ ಮತ್ತು ಅವರು ಬಳಸುವ ಸರ್ಕಾರಿ ಬೊಲೆರೋ ವಾಹನವನ್ನೂ ಅಧಿಕಾರಿಗಳು ಬಿಡದೆ ತಪಾಸಣೆ ನಡೆಸಿದ್ದಾರೆ. ಸುಮಾರು 12 ಗಂಟೆಗಳ ಸುದೀರ್ಘ ಪರಿಶೀಲನೆಯ ನಂತರ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಪತ್ತೆಯಾದ ಅಕ್ರಮ ಆಸ್ತಿಗಳ ವಿವರ
ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಯ ಮನೆಯಲ್ಲಿ ಸಿಕ್ಕಿರುವ ಆಸ್ತಿಗಳ ಪಟ್ಟಿ ಬೆಚ್ಚಿಬೀಳಿಸುವಂತಿದೆ;
- ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ.
- ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್‍ಗಳು.
- ಮನೆಗಳು: ಬಳ್ಳಾರಿ ನಗರದಲ್ಲೇ 3 ಸುಸಜ್ಜಿತ ಮನೆಗಳು.
- ನಗದು: ಮನೆಯಲ್ಲಿ 8.5 ಲಕ್ಷ ರೂ. ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಹಣ.
- ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ.
- ವಾಹನಗಳು: ಮೂರು ದ್ವಿಚಕ್ರ ವಾಹನಗಳು.
ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು
ಇದಲ್ಲದೆ, ಇನ್ನೂ ಹಲವು ಬೇನಾಮಿ ಆಸ್ತಿಗಳ ಬಗ್ಗೆ ದಾಖಲೆಗಳು ಸಿಕ್ಕಿದ್ದು, ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆ ಮುಂದುವರಿಸಿದೆ.