
ಚಾಮರಾಜನಗರ, ಏಪ್ರಿಲ್ 8: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಸೈಕೋಪಾತ್ ಒಬ್ಬನ ಕೈಚಳಕ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ. ಇಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮನೆಗಳ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದವು. ಇದರಿಂದ ಸಂಶಯಗೊಂಡ ನಿವಾಸಿಗಳು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ಮಹಿಳೆಯ ವೇಷದಲ್ಲಿ ಬರುವ ಈ ವ್ಯಕ್ತಿ, ಒಳ ಉಡುಪುಗಳನ್ನು ಕದ್ದು, ಸ್ಥಳದಲ್ಲೇ ಅವುಗಳನ್ನು ಧರಿಸಿಕೊಂಡು ವಿಕೃತಿ ಮೆರೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸೈಕೋಪಾತ್‌ನ ವಿಚಿತ್ರ ವರ್ತನೆಯಿಂದ ಕಾಲೋನಿಯ ಮಹಿಳೆಯರು ಆತಂಕಕ್ಕೊಳಗಾಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.