
ಹಾಸನ, ಏಪ್ರಿಲ್ 8: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಈಗ ಕರ್ನಾಟಕದ (Karnataka) ಕಾಫಿ ತೋಟಗಳಿಗೂ ತಟ್ಟಿವೆ. ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ, ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿದ್ದ ಕಾಫಿ ಉದ್ಯಮ ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಕದನದಿಂದಾಗಿ ಕಾಫಿ ರಫ್ತು (Coffee Export) ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ.
ದಶಕದ ಬಳಿಕ ಏರಿದ್ದ ಬೆಲೆ ಈಗ ದಿಢೀರ್ ಕುಸಿತ
ಕಳೆದ ಹಲವು ದಶಕಗಳ ನಂತರ ಕಾಫಿಗೆ ಬಂಪರ್ ಬೆಲೆ ಬಂದಿತ್ತು. ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಳೆಗಾರರು, ಬೆಲೆ ಮತ್ತಷ್ಟು ಏರಬಹುದು ಎಂಬ ನಿರೀಕ್ಷೆಯಲ್ಲಿ ಕಾಫಿಯನ್ನು ಮಾರಾಟ ಮಾಡದೆ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಯುದ್ಧ ಶುರುವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಲೆ ಬರೋಬ್ಬರಿ ಶೇಕಡಾ 20 ರಷ್ಟು ಕುಸಿದಿದೆ.
ಕಾಫಿ ದರ ವಿವರ
- ಅರೇಬಿಕಾ ಕಾಫಿ: ಕಳೆದ ವರ್ಷ 50 ಕೆಜಿ ಚೀಲಕ್ಕೆ 29 ಸಾವಿರ ರೂ. ಇದ್ದ ಬೆಲೆ ಈಗ 23 ಸಾವಿರಕ್ಕೆ ಕುಸಿದಿದೆ.
ರೊಬಸ್ಟಾ ಕಾಫಿ: 12 ಸಾವಿರ ರೂ. ಇದ್ದ ಬೆಲೆ ಈಗ ಕೇವಲ 8 ಸಾವಿರಕ್ಕೆ ಇಳಿಕೆಯಾಗಿದೆ. - ಗಾಯದ ಮೇಲೆ ಬರೆ ಎಳೆದ ವಿದೇಶಿ ಫಸಲು
ಒಂದೆಡೆ ಯುದ್ಧದಿಂದ ರಫ್ತು ನಿಂತಿದ್ದರೆ, ಮತ್ತೊಂದೆಡೆ ಜಗತ್ತಿನ ಅತಿ ದೊಡ್ಡ ಕಾಫಿ ಬೆಳೆಗಾರ ರಾಷ್ಟ್ರಗಳಾದ ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಈ ಬಾರಿ ಉತ್ತಮ ಫಸಲು ಬಂದಿದೆ. ಕಳೆದ ವರ್ಷ ಅಲ್ಲಿ ಫಸಲು ಕೈಕೊಟ್ಟಿದ್ದರಿಂದ ಭಾರತದ ಕಾಫಿಗೆ ಭಾರಿ ಬೇಡಿಕೆ ಇತ್ತು. ಆದರೆ ಈಗ ಆ ದೇಶಗಳಲ್ಲೂ ಫಸಲು ಚೆನ್ನಾಗಿರುವುದು ಮತ್ತು ಯುದ್ಧದ ಪರಿಣಾಮ ರಫ್ತು ರದ್ದಾಗಿರುವುದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಫಿ ಬೆಳೆಗಾರರ ಆಗ್ರಹವೇನು?
ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 70 ರಷ್ಟಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಈ ಉದ್ಯಮವನ್ನೇ ನಂಬಿವೆ. ‘ರಫ್ತುದಾರರಿಗೆ ಕೇಂದ್ರ ಸರ್ಕಾರ ಹೇಗೆ ನೆರವಿನ ಹಸ್ತ ನೀಡುತ್ತದೆಯೋ, ಅದೇ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ವಿಶೇಷ ಪರಿಹಾರ ಘೋಷಿಸಬೇಕು’ ಎಂದು ಅಂತರಾಷ್ಟ್ರೀಯ ಕಾಫಿ ಸಂಘಟನೆ ಸಲಹಾ ಸಮಿತಿ ಸದಸ್ಯರಾದ ಡಾ. ಎಚ್ ಡಿ ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇರಾನ್ ಮೇಲೆ ಭೀಕರ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ!
ಸದಗಯ ಇರಾನ್-ಅಮೆರಿಕ ಯುದ್ಧಕ್ಕೆ 2 ವಾರಗಳ ಕದನ ವಿರಾಮ ಘೋಷಿಸಲಾಗಿದ್ದು, ಇದು ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.