Headlines

ಕಥೆ ಕದ್ದ ಆರೋಪ: ಆದಿತ್ಯ ಧರ್ ಬಗ್ಗೆ ಹೇಳಿಕೆ ನೀಡದಂತೆ ಸಂತೋಷ್​ ಕುಮಾರ್​ಗೆ ಕೋರ್ಟ್ ಆದೇಶ

ಕಥೆ ಕದ್ದ ಆರೋಪ: ಆದಿತ್ಯ ಧರ್ ಬಗ್ಗೆ ಹೇಳಿಕೆ ನೀಡದಂತೆ ಸಂತೋಷ್​ ಕುಮಾರ್​ಗೆ ಕೋರ್ಟ್ ಆದೇಶ

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್’ (Dhurandhar) ಚಿತ್ರದ ಕಥೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಸಂತೋಷ್ ಕುಮಾರ್ ಆರ್‌ಎಸ್‌ (Santosh Kumar RS) ಅವರಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದಿತ್ಯ ಧರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರಿಫ್ ಎಸ್. ಡಾಕ್ಟರ್ ಅವರ ಪೀಠವು ಈ ಆದೇಶ ಹೊರಡಿಸಿದೆ. ಇದರಿಂದಾಗಿ ಆದಿತ್ಯ ಧರ್ (Aditya Dhar) ಅವರಿಗೆ ಕಾನೂನು ಹೋರಾಟದಲ್ಲಿ ಮೊದಲ ಹಂತದ ಜಯ ಸಿಕ್ಕಂತೆ ಆಗಿದೆ.

‘ಧುರಂಧರ್’ ಸರಣಿಯ ಎರಡನೇ ಭಾಗವಾದ ‘ಧುರಂಧರ್: ದಿ ರಿವೇಂಜ್’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಂತೋಷ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಆದಿತ್ಯ ಧರ್ ಅವರು ತಮ್ಮ ಕಥೆಯನ್ನು ಕದ್ದು ಸಿನಿಮಾ ಮಾಡಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದರು. ತಮ್ಮ ಬಳಿ ನೋಂದಾಯಿತವಾಗಿರುವ ‘ಡಿ ಸಾಹೇಬ್’ ಎಂಬ ಸ್ಕ್ರಿಪ್ಟ್ ಅನ್ನು ಆದಿತ್ಯ ಧರ್ ಕಾಪಿ ಮಾಡಿದ್ದಾರೆ ಎಂದು ಸಂತೋಷ್ ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಆದಿತ್ಯ ಧರ್, ಲೀಗಲ್ ನೋಟಿಸ್ ಕಳುಹಿಸಿ ಈ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಸಂತೋಷ್ ಕುಮಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯ ವೇಳೆ ಆದಿತ್ಯ ಧರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿರೇಂದ್ರ ಸರಾಫ್, ‘ಸಂತೋಷ್ ಕುಮಾರ್ ಅವರ ಹೇಳಿಕೆಗಳು ಆಧಾರರಹಿತವಾಗಿದ್ದು, ನಿರ್ದೇಶಕರ ಘನತೆಗೆ ಧಕ್ಕೆ ತರುತ್ತಿವೆ’ ಎಂದು ವಾದಿಸಿದರು.

ಸಂತೋಷ್ ಕುಮಾರ್ ಅವರಿಗೆ ನೋಟಿಸ್ ನೀಡಲಾಗಿದ್ದರೂ, ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಆದಿತ್ಯ ಧರ್ ಅವರು ಮೇಲ್ನೋಟಕ್ಕೆ ಬಲವಾದ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಮುಂದಿನ ವಿಚಾರಣೆಯವರೆಗೆ (ಏಪ್ರಿಲ್ 16) ಸಂತೋಷ್ ಕುಮಾರ್ ಅವರು ಈ ಸ್ಕ್ರಿಪ್ಟ್ ವಿಚಾರವಾಗಿ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ: ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್

‘ಪ್ರತಿವಾದಿಯು (ಸಂತೋಷ್) ದೂರಿನಲ್ಲಿ ಉಲ್ಲೇಖಿಸಲಾದ ಮಾತುಗಳನ್ನು ಅಥವಾ ಅದೇ ರೀತಿಯ ಇತರ ಯಾವುದೇ ಆರೋಪಗಳನ್ನು ಪುನರಾವರ್ತಿಸಬಾರದು’ ಎಂದು ನ್ಯಾಯಾಲಯ ಆದೇಶಿಸಿದೆ. ಈ ಆದೇಶವು ಕೇವಲ ಸಂತೋಷ್ ಕುಮಾರ್ ಅವರಿಗೆ ಮಾತ್ರ ಅನ್ವಯಿಸಲಿದ್ದು, ಏಪ್ರಿಲ್ 16ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *