ಶಾಂತಿ ಒಪ್ಪಂದದ ನಡುವೆಯೂ ಯುದ್ಧದ ಕಾರ್ಮೋಡ, ಒಪ್ಪಂದ ಮೀರಿದರೆ ಹುಷಾರ್, ಇರಾನ್ ಸುತ್ತ ಸೇನೆ ಜಮಾವಣೆ ಮಾಡಿದ ಟ್ರಂಪ್

ಶಾಂತಿ ಒಪ್ಪಂದದ ನಡುವೆಯೂ ಯುದ್ಧದ ಕಾರ್ಮೋಡ, ಒಪ್ಪಂದ ಮೀರಿದರೆ ಹುಷಾರ್, ಇರಾನ್ ಸುತ್ತ ಸೇನೆ ಜಮಾವಣೆ ಮಾಡಿದ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 09: ಅಮೆರಿಕ ಮತ್ತು ಇರಾನ್(Iran) ನಡುವಿನ ಕದನ ವಿರಾಮದ ಘೋಷಣೆಯ ಬೆನ್ನಲ್ಲೇ ಜಾಗತಿಕ ರಾಜಕೀಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿಯತೊಡಗಿವೆ. ತಮ್ಮ ‘ಟ್ರುತ್ ಸೋಶಿಯಲ್’ ವೇದಿಕೆಯಲ್ಲಿ ಅಬ್ಬರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸರ್ಕಾರಕ್ಕೆ ಅತ್ಯಂತ ಗಂಭೀರ ಎಚ್ಚರಿಕೆ ನೀಡಿದ್ದಾರೆ.ಇರಾನ್ ಸುತ್ತಮುತ್ತ ಅಮೆರಿಕದ ನೌಕಾಪಡೆ, ಯುದ್ಧ ವಿಮಾನಗಳು ಮತ್ತು ಮಿಲಿಟರಿ ಸಿಬ್ಬಂದಿ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಲಿದ್ದಾರೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಮದ್ದುಗುಂಡು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ಸೇನೆ ಇರಾನ್‌ನ ಸುತ್ತಲೂ ಮೊಕ್ಕಾಂ ಹೂಡಲಿದೆ. ಒಂದು ಶಾಶ್ವತ ಮತ್ತು ನೈಜ ಒಪ್ಪಂದ ಏರ್ಪಡುವವರೆಗೆ ನಮ್ಮ ಮಿಲಿಟರಿ ಅಲ್ಲಿಂದ ಕದಲುವುದಿಲ್ಲ ದು ಟ್ರಂಪ್ ಘೋಷಿಸಿದ್ದಾರೆ. ಒಪ್ಪಂದದ ಪಾಲನೆಯಲ್ಲಿ ಇರಾನ್ ಒಂದು ವೇಳೆ ವಿಫಲವಾದರೆ ಅಥವಾ ವಾಷಿಂಗ್ಟನ್‌ನ ಶರತ್ತುಗಳನ್ನು ಗಾಳಿಗೆ ತೂರಿದರೆ, ಅಮೆರಿಕ ಹಿಂದೆಂದೂ ನೋಡಿರದ ರೀತಿಯಲ್ಲಿ ಭೀಕರ ಮಿಲಿಟರಿ ದಾಳಿ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಯಾವುದೇ ಕಾರಣಕ್ಕೂ ಒಪ್ಪಂದ ಮುರಿದರೆ ಆಗ ಗುಂಡಿನ ದಾಳಿ ಆರಂಭವಾಗಲಿದೆ. ಅದು ಹಿಂದೆಂದಿಗಿಂತಲೂ ದೊಡ್ಡದಾಗಿ ಮತ್ತು ಬಲವಾಗಿರಲಿದೆ ಎಂಬುದು ಟ್ರಂಪ್ ಹೇಳಿದ್ದಾರೆ.

ಇರಾನ್‌ನ ಅಸಮಾಧಾನ ಮತ್ತು ಇಸ್ರೇಲ್ ದಾಳಿ
ಬುಧವಾರ ಇಸ್ರೇಲ್ ಪಡೆಗಳು ಲೆಬನಾನ್ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ನೂರಾರು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇರಾನ್ ಸರ್ಕಾರ, ಅಮೆರಿಕದೊಂದಿಗೆ ಶಾಶ್ವತ ಶಾಂತಿ ಮಾತುಕತೆ ನಡೆಸುವುದು ಈಗಿನ ಸಂದರ್ಭದಲ್ಲಿ ಅಸಮಂಜಸ ಎಂದು ಕಿಡಿಕಾರಿದೆ. ಈ ಬೆಳವಣಿಗೆಯು ಎರಡೂ ದೇಶಗಳ ನಡುವಿನ ಮಾತುಕತೆಗೆ ಹಿನ್ನಡೆಯುಂಟು ಮಾಡಿದೆ.

ಮತ್ತಷ್ಟು ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಹಾರ್ಮುಜ್ ಜಲಸಂಧಿಯ ಭದ್ರತೆ
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಇರಾನ್ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಮತ್ತು ಜಾಗತಿಕ ತೈಲ ವ್ಯಾಪಾರಕ್ಕೆ ಪ್ರಮುಖವಾದ ಹಾರ್ಮುಜ್ ಜಲಸಂಧಿಯು (Strait of Hormuz) ಸುರಕ್ಷಿತವಾಗಿ ಮತ್ತು ಮುಕ್ತವಾಗಿರಬೇಕು. ಇದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಟ್ರಂಪ್ ಅವರ ಈ ನಡೆ ಇರಾನ್ ಮೇಲೆ ಗರಿಷ್ಠ ಒತ್ತಡ ಹೇರುವ ತಂತ್ರದ ಮುಂದುವರಿದ ಭಾಗದಂತೆ ಕಾಣುತ್ತಿದೆ. ಇರಾನ್ ಈ ಬೆದರಿಕೆಗೆ ಮಣಿಯುತ್ತದೆಯೇ ಅಥವಾ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *