ತಮ್ಮ ಮೊದಲ ಹೀರೋ ದಳಪತಿ ವಿಜಯ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಮಾತು: ನಟಿ ಹೇಳಿದ್ದೇನು?

ತಮ್ಮ ಮೊದಲ ಹೀರೋ ದಳಪತಿ ವಿಜಯ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಮಾತು: ನಟಿ ಹೇಳಿದ್ದೇನು?

ಪ್ರಿಯಾಂಕಾ ಚೋಪ್ರಾ (Priyanka Chopra), ಈಗ ಹಾಲಿವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರು. ಬಾಲಿವುಡ್​​ನಲ್ಲಿ ಸಹ ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದಿದ್ದರು. ಬಾಲಿವುಡ್, ಹಾಲಿವುಡ್​​ನಲ್ಲೂ ಚಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ಅವರ ಮೊದಲ ಸಿನಿಮಾ ತಮಿಳು ಭಾಷೆಯ ‘ತಮಿಳನ್’. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ‘ತಮಿಳನ್’ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಜನಪ್ರಿಯತೆಯನ್ನು ಕಂಡು ತಾವು ಮೊದಲ ಬಾರಿಗೆ ಹೇಗೆ ಬೆರಗಾಗಿದ್ದೆ ಎಂಬ ಆಸಕ್ತಿದಾಯಕ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ.

2002 ರಲ್ಲಿ ಬಿಡುಗಡೆ ಆದ ‘ತಮಿಳನ್’ ಸಿನಿಮಾ ಮೂಲಕ ಪ್ರಿಯಾಂಕಾ ಚೋಪ್ರಾ ಚಿತ್ರರಂಗಕ್ಕೆ ಕಾಲಿರಿಸಿದರು. ಅದು ಅವರ ಮೊಟ್ಟ ಮೊದಲ ಸಿನಿಮಾ. ಆಗಿನ್ನೂ ಅವರಿಗೆ ಸುಮಾರು 18 ವರ್ಷ ವಯಸ್ಸು. ಸಿನಿಮಾ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ‘ನನ್ನ ಮೊದಲ ಸಿನಿಮಾ ‘ತಮಿಳನ್’ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ, ಸಹ-ನಟ ವಿಜಯ್ ಅವರ ಜನಪ್ರಿಯತೆ ನೋಡಿ ನನಗೆ ಆಶ್ಚರ್ಯವಾಗಿತ್ತು. ನಾವು ಸೆಟ್‌ಗೆ ಹೋದಾಗಲೆಲ್ಲಾ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿರುತ್ತಿದ್ದರು. ಅವರು ನೃತ್ಯ ಮಾಡುತ್ತಿರಲಿ ಅಥವಾ ನಟಿಸುತ್ತಿರಲಿ, ಜನರು ಅವರನ್ನು ಒಬ್ಬ ‘ದೇವಮಾನವ’ ಎಂಬಂತೆ ಆರಾಧಿಸುತ್ತಿದ್ದರು’ ಎಂದಿದ್ದಾರೆ ನಟಿ.

‘ನಾನಗಾಗ ಇನ್ನೂ 18 ವರ್ಷ. ವಿಜಯ್ ಅವರ ಆ ರೀತಿಯ ಕ್ರೇಜ್ ನೋಡಿದಾಗ, ತಮಗೂ ಇಂತಹ ಅಭಿಮಾನಿ ಬಳಗ ಸಿಗಲಿ ಎಂಬ ಆಸೆ ಮೂಡಿತ್ತು. ಅದೊಂದು ಅದ್ಭುತದಂತೆ ನನಗೆ ಆಗ ಭಾಸವಾಗಿತ್ತು’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ:ಫ್ಯಾಷನ್ ಶೋನಲ್ಲಿ ಮಿರಿ-ಮಿರಿ ಮಿಂಚಿದ ನಟಿ ಪ್ರಿಯಾಂಕಾ ಚೋಪ್ರಾ

ತಮಿಳು ಭಾಷೆ ತಿಳಿಯದಿದ್ದರೂ, ಸಂಭಾಷಣೆಗಳನ್ನು ಬಾಯಿಪಾಠ ಮಾಡಿ ಕಲಿತು ನಟಿಸುತ್ತಿದ್ದರಂತೆ. ಈ ಸಮಯದಲ್ಲಿ ವಿಜಯ್ ಅವರು ಬಹಳ ಸಹಕಾರ ನೀಡಿದ್ದರು ಎಂದು ಪ್ರಿಯಾಂಕಾ ಈ ಹಿಂದೆಯೂ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕೇವಲ ನಟನೆಯಲ್ಲದೆ, ವಿಜಯ್ ಅವರ ಪ್ರೇರಣೆಯಿಂದಲೇ ಪ್ರಿಯಾಂಕಾ ಅವರು ಆ ಚಿತ್ರದಲ್ಲಿ ‘ಉಲ್ಲಾತ್ತೈ ಕಿಳ್ಳಾದೆ’ ಎಂಬ ಹಾಡನ್ನು ಕೂಡ ಹಾಡಿದ್ದರು.

ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ತಮಗೆ ‘ಸ್ಟಾರ್‌ಡಮ್’ ಎಂದರೇನು ಎಂಬುದನ್ನು ಮೊದಲು ಪರಿಚಯಿಸಿದ್ದೇ ದಳಪತಿ ವಿಜಯ್ ಮತ್ತು ಅವರ ಅಭಿಮಾನಿಗಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಬರೆದಿರುವ ತಮ್ಮ ಆತ್ಮಕತೆಯಲ್ಲಿಯೂ ಸಹ ದಳಪತಿ ವಿಜಯ್ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಮ್ಮ ಮೊದಲ ಸಿನಿಮಾಕ್ಕೆ ಅವರು ನೀಡಿದ ಸಹಕಾರವನ್ನು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *