
ಬೆಂಗಳೂರು, ಏಪ್ರಿಲ್ 11: ಪೀಣ್ಯ ಎಲಿವೇಟೆಡ್ ಫ್ಲೈಓವರ್ನ (Peenya Elevated Flyover) ಕೇಬಲ್ ದುರಸ್ತಿ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈಗ ಅಂತಿಮ ಹಂತದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೇಲ್ಸೇತುವೆಯನ್ನು ಏಪ್ರಿಲ್ 13ರಿಂದ ಐದು ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಪೀಣ್ಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಐದು ದಿನಗಳ ಕಾಲ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ಪೀಣ್ಯ ಫ್ಲೈಓವರ್ ಬಂದ್ ಆಗುವ ಅವಧಿ
ಏಪ್ರಿಲ್ 13ರ ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡು, ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಪೀಣ್ಯ ಫ್ಲೈಓವರ್ ಬಂದ್: ಪರ್ಯಾಯ ಮಾರ್ಗಗಳು
ವಾಹನ ಸವಾರರಿಗೆ ತೊಂದರೆಯಾಗದಂತೆ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಅವುಗಳು ಹೀಗಿವೆ;
- ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಭಾಗದ ಎನ್ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ಆರ್ಎಸ್ (SRS) ಜಂಕ್ಷನ್ ಮತ್ತು ಗೊರಗುಂಟೆಪಾಳ್ಯ ಮೂಲಕ ಸಂಚರಿಸಬೇಕು.
- ಸಿಎಂಟಿಐನಿಂದ ನೆಲಮಂಗಲ ಕಡೆಗೆ ಹೋಗುವ ವಾಹನಗಳು ಫ್ಲೈಓವರ್ ಕೆಳಭಾಗದ ಎನ್ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್ಆರ್ಎಸ್ ಜಂಕ್ಷನ್, ಪೀಣ್ಯ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮತ್ತು ಪಾರ್ಲೆ ಜಿ ಟೋಲ್ ಮೂಲಕ ಸಾಗಬೇಕು.
ಇದನ್ನೂ ಓದಿ: ಜೋಂಬಿ ಡ್ರಗ್ಸ್ ಕೇಸ್: ವಿಡಿಯೋ ಹಂಚಿಕೊಂಡ ನಟ ಸೇರಿ ಹಲವರಿಗೆ ಸಂಕಷ್ಟ
ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.