IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಅದು ಸಹ ರಾಜಸ್ಥಾನ್ ರಾಯಲ್ಸ್ ವಿರುದ್ಧ. ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಆರ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಜೋಫ್ರಾ ಆರ್ಚರ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು.
ಇದಾಗ್ಯೂ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಮೊದಲ ಓವರ್ನಲ್ಲಿ ಆರ್ಸಿಬಿ ಬರೋಬ್ಬರಿ 45 ರನ್ ಕಲೆಹಾಕಿದ್ದರು. ಇದಾದ ಬಳಿಕ ಕೂಡ ಅಬ್ಬರಿಸಿದ ಆರ್ಸಿಬಿ ಬ್ಯಾಟರ್ಗಳು ಪವರ್ಪ್ಲೇನಲ್ಲಿ 61 ರನ್ ಚಚ್ಚಿದ್ದರು.
ಇನ್ನು 10 ಓವರ್ಗಳ ಮುಕ್ತಾಯದ ವೇಳೆಗೆ ಆರ್ಸಿಬಿ ತಂಡದ ಸ್ಕೋರ್ 89 ಕ್ಕೆ ಬಂದು ನಿಂತಿತು. ಆದರೆ ಈ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ರೊಮಾರಿಯೋ ಶೆಫರ್ಡ್ 12ನೇ ಓವರ್ನ 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರು.
ವಿಶೇಷ ಎಂದರೆ ಇದು ಆರ್ಸಿಬಿ ತಂಡದ ಇನಿಂಗ್ಸ್ನ ಮೊದಲ ಸಿಕ್ಸ್ ಆಗಿತ್ತು. ಪಂದ್ಯದ ಮೊದಲ ಸಿಕ್ಸ್ ಬಾರಿಸಲು ಆರ್ಸಿಬಿ ದಾಂಡಿಗರು ಬರೋಬ್ಬರಿ 69 ಎಸೆತಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಒಂದು ಸಿಕ್ಸ್ ಬಾರಿಸಲು ಅತ್ಯಧಿಕ ಓವರ್ಗಳನ್ನಾಡಿದ ತಂಡವೆಂಬ ಅಪಖ್ಯಾತಿಯನ್ನು ಆರ್ಸಿಬಿ ತಂಡ ತನ್ನದಾಗಿಸಿಕೊಂಡಿದೆ.
ಅಂದರೆ ಕಳೆದ 15 ಪಂದ್ಯಗಳಲ್ಲಿ ಯಾವುದೇ ತಂಡ ಮೊದಲ ಸಿಕ್ಸ್ ಬಾರಿಸಲು 10 ಕ್ಕಿಂತ ಹೆಚ್ಚಿನ ಓವರ್ ತೆಗೆದುಕೊಂಡಿರಲಿಲ್ಲ. ಆದರೆ ಹೊಡಿಬಡಿ ದಾಂಡಿಗರ ದಂಡೇ ಇರುವ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಸಿಕ್ಸ್ ಬಾರಿಸಿದ್ದು 12ನೇ ಓವರ್ನ 3ನೇ ಎಸೆತದಲ್ಲಿ. ಅದು ಸಹ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮಾರಿಯೋ ಶೆರ್ಫಡ್ ಬ್ಯಾಟ್ನಿಂದ. ಈ ಸಿಕ್ಸ್ ಬಳಿಕವಷ್ಟೇ, ರಜತ್ ಪಾಟಿದಾರ್ (4) ಹಾಗೂ ವೆಂಕಟೇಶ್ ಅಯ್ಯರ್ (2) ಸಿಕ್ಸರ್ಗಳನ್ನು ಬಾರಿಸಿದ್ದರು.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಸಿಕ್ಸ್ ಸಿಡಿಸಲು ಬರೋಬ್ಬರಿ 69 ಎಸೆತಗಳನ್ನು ತೆದುಕೊಂಡು, ಐಪಿಎಲ್ 2026 ರಲ್ಲಿ ಒಂದು ಸಿಕ್ಸ್ಗಾಗಿ ಅತ್ಯಧಿಕ ಎಸೆತಗಳನ್ನು ಆಡಿದ ತಂಡವೆಂಬ ಅಪಕೀರ್ತಿಯನ್ನು ತನ್ನದಾಗಿಸಿಕೊಂಡಿದೆ.






