
IPL 2026: ಐಪಿಎಲ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ತಂಡ ಭರ್ಜರಿ ಗೆಲುವು ದಾಖಲಿಸಿದೆ. ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು 20 ಓವರ್ಗಳಲ್ಲಿ 201 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 18 ಓವರ್ಗಳಲ್ಲಿ 202 ರನ್ಗಳಿಸಿ ಪಂದ್ಯ ಮುಗಿಸಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡ 6 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಸೋಲಾಗಿದ್ದರೂ ಸಹ, ತಂಡವು ಆರಂಭಿಕ ಕುಸಿತದಿಂದ ಚೇತರಿಸಿಕೊಂಡು 200ರ ಗಡಿ ದಾಟಿದ್ದು ಒಂದು ಉತ್ತಮ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಸತತ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಸ್ವತಃ ನಾಯಕನ ಜವಾಬ್ದಾರಿ ಹೊತ್ತ ಪಾಟಿದಾರ್, ಕೇವಲ 40 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಪವರ್‌ಪ್ಲೇನಲ್ಲಿ ನಾವು ವಿಕೆಟ್ ಕಳೆದುಕೊಂಡ ರೀತಿಗೆ ಹೋಲಿಸಿದರೆ, ಅಲ್ಲಿಂದ ಚೇತರಿಸಿಕೊಂಡು 201 ರನ್ ಗಳಿಸಿದ್ದು ನಮಗೆ ಪಾಸಿಟಿವ್ ಅಂಶ. ಹೀಗಾಗಿ ಈ ಸೋಲಿನ ನಡುವೆ ನಾನು ಸಕರಾತ್ಮಕ ಅಂಶಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇನ್ನು ವೈಭವ್ ಸೂರ್ಯವಂಶಿ ಅವರ ಆರ್ಭಟದ ಬಗ್ಗೆ ಮಾತನಾಡಿದ ಪಾಟಿದಾರ್, ವೈಭವ್ ಪವರ್‌ಪ್ಲೇನಲ್ಲಿ ಬ್ಯಾಟ್ ಮಾಡಿದ ರೀತಿ ಪಂದ್ಯದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡಿತು. ಅವರ ಬಿರುಸಿನ ಬ್ಯಾಟಿಂಗ್ ನಮ್ಮ ಸೋಲಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಬಳಸಿಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡ ರಜತ್ ಪಾಟಿದಾರ್, ನಮ್ಮ ಬಳಿ ವೆಂಕಿ (ಅಯ್ಯರ್), ರೊಮಾರಿಯೋ ಶೆಫರ್ಡ್ ಮತ್ತು ಕೃಣಾಲ್ ಪಾಂಡ್ಯ ಅವರಂತಹ ಬೌಲಿಂಗ್ ಆಯ್ಕೆಗಳಿದ್ದವು. ಹಾಗಾಗಿ ಸುಯಶ್ ಶರ್ಮಾ ಅವರನ್ನು ತರದೇ ಇರುವುದು ದೊಡ್ಡ ಮಟ್ಟದ ಪರಿಣಾಮ ಬೀರಲಿಲ್ಲ,” ಎಂದರು.
ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ
ಅಲ್ಲದೆ ಐಪಿಎಲ್‌ನಂತಹ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ತಪ್ಪುಗಳು ಸಹಜ ಎಂದು ಒಪ್ಪಿಕೊಂಡ ಪಾಟಿದಾರ್, ಮುಂದಿನ ಪಂದ್ಯಗಳಲ್ಲಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಭರವಸೆ ನೀಡಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ಆರ್‌ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಲಿದೆ ಎಂದು ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.