ಭಾರತೀಯ ಹಬ್ಬ ಹರಿದಿನಗಳು, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಿಹಿತಿನಿಸು ಇರಲೇಬೇಕು. ಈ ಸಿಹಿ ಖಾದ್ಯಗಳು ಎಂದಾಕ್ಷಣ ನೆನಪಾಗುವುದೇ ಮೈಸೂರ್ ಪಾಕ್ (Mysore Pak), ಗುಲಾಬ್ ಜಾಮೂನ್, ರಸಗುಲ್ಲಾ. ಇದಲ್ಲದೇ ಪ್ರದೇಶದಿಂದ ಪ್ರದೇಶಕ್ಕೆ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕಾರು ಸಿಹಿ ಖಾದ್ಯಗಳಿವೆ. ಈ ಎಲ್ಲಾ ಸಿಹಿ ತಿನಿಸುಗಳ ರಾಜನೆಂದು ಮೈಸೂರ್ ಪಾಕನ್ನು ಕರೆಯಲಾಗುತ್ತದೆ. ಹೌದು ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುವಂತೆ ಮೈಸೂರ್ ಪಾಕನ್ನು ಸಿಹಿ ತಿಂಡಿಗಳ ರಾಜ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾಗಿರುವ ಈ ಖಾದ್ಯವನ್ನೇ ಏಕೆ ಸಿಹಿತಿಂಡಿಗಳ ರಾಜ ಎಂದು ಕರೆಯೋದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಮೈಸೂರು ಪಾಕನ್ನೇ ಸಿಹಿತಿಂಡಿಗಳ ರಾಜ ಎಂದು ಕರೆಯೋದೇಕೆ?
ಮೈಸೂರು ಪಾಕನ್ನು “ಸಿಹಿಗಳ ರಾಜ” ಎಂದು ಕರೆಯಲಾಗುತ್ತದೆ. ಕಡಲೆ ಹಿಟ್ಟು, ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಲಾದ ಈ ಸಿಹಿತಿಂಡಿಯು ಮೈಸೂರಿನ ರಾಜಮನೆತನದ ಪಾಕಶಾಲೆಯೊಂದಿಗೆ ಸಂಬಂಧ ಹೊಂದಿದೆ. ಹೀಗೆ ಮೈಸೂರ್ ಪಾಕ್‌ನ ರಾಜಮನೆತನದ ಹಿನ್ನೆಲೆ, ಅದರ ಶ್ರೀಮಂತ ರುಚಿ ಮತ್ತು ರಾಷ್ಟ್ರೀಯ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿಹಿ ಖಾದ್ಯವನ್ನು ಸಿಹಿ ತಿಂಡಿಗಳ ರಾಜ ಎಂದು ಕರೆಯಲಾಗುತ್ತದೆ
ಮೈಸೂರು ಪಾಕ್ ಇತಿಹಾಸ:
ಮೈಸೂರು ಪಾಕ್ ಅನ್ನು ಮೊದಲು ಒಡೆಯರ್ ರಾಜವಂಶದ ಆಳ್ವಿಕೆಯಲ್ಲಿ ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ತಯಾರಿಸಲಾಯಿತು. ಸುಮಾರು 1930 ರ ದಶಕದಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಸಮಯದಲ್ಲಿ ಕಡಲೆ ಹಿಟ್ಟು, ಸಕ್ಕರೆ ಮತ್ತು ತುಪ್ಪದ ಸಮ್ಮಿಲನವಾದ ಮೈಸೂರ್ ಪಾಕನ್ನು ಮೊದಲ ಬಾರಿಗೆ ತಯಾರಿಸಲಾಯಿತು. ಸರಳ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಈ ಈ ಸಿಹಿತಿಂಡಿಯ ಸೃಷ್ಟಿಯ ಶ್ರೇಯಸ್ಸು ಅರಮನೆಯ ಮುಖ್ಯ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪ ಅವರಿಗೆ ಸಲ್ಲುತ್ತದೆ. ಸರಳ ಪದಾರ್ಥಗಳನ್ನು ಬಳಸಿ ತಯಾರಿಸಿದ ಈ ಸಿಹಿತಿಂಡಿ ರಾಜಮನೆತನದವರಿಗೆ ಬಲು ಇಷ್ಟವಾಯಿತು. ಈ ಖಾದ್ಯ ಅರಮನೆಯಲ್ಲಿ ಮೊದಲು ತಯಾರಿಸಲಾದ ಕಾರಣ ಬಾಣಸಿಗ ಮಾದಪ್ಪ ಇದಕ್ಕೆ ಮೈಸೂರ್ ಪಾಕ್ ಎಂದು ಹೆಸರಿಟ್ಟರು. ಇಂದು ಕರ್ನಾಟಕದ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾಗಿರುವ ಈ ಸಿಹಿ ಖಾದ್ಯ ವಿಶ್ವಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಹಣ್ಣು ತರಕಾರಿಗಳಲ್ಲಿ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದು ಹಾಕಲು ಈ ಸರಳ ವಿಧಾನ ಅನುಸರಿಸಿ
ಮೈಸೂರು ಪಾಕ್ ಏಕೆ ಇಷ್ಟೊಂದು ಜನಪ್ರಿಯವಾಗಿದೆ?
ಮೈಸೂರು ಪಾಕ್ ತನ್ನ ಶ್ರೀಮಂತ ರುಚಿ ಮತ್ತು ಸುಲಭವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವ ಸರಳ ವಿಧಾನದಿಂದಾಗಿ ಜನಪ್ರಿಯವಾಗಿದೆ. ಮೃದುವಾದ ಮತ್ತು ಸ್ವಲ್ಪ ಪುಡಿಪುಡಿಯಾದ ವಿನ್ಯಾಸವನ್ನು ಹೊಂದಿರುವ, ಬಾಯಿಯಲ್ಲಿಟ್ಟರೆ ಸುಲಭವಾಗಿ ಕರಗುವ ಈ ಸಿಹಿ ಖಾದ್ಯ ಎಲ್ಲಾ ವಯೋಮಾನದ ಜನರಿಗೆ ಇಷ್ಟವಾಗುತ್ತದೆ. ಇತರ ಅನೇಕ ಸಿಹಿತಿಂಡಿಗಳಿಗೆ ಹೋಲಿಸಿದರೆ ಇದು ಸುದೀರ್ಘ ಬಾಳಿಕೆ ಬರುತ್ತದೆ. ಹೀಗೆ ಇದರ ರುಚಿ ಇದರ ರಾಜಮನೆತನದ ಮೂಲ ಮತ್ತು ಸಾಂಪ್ರದಾಯಿಕ ತಯಾರಿಕೆಯ ಶೈಲಿಯು ಭಾರತದಾದ್ಯಂತ ಇದರ ಖ್ಯಾತಿಯನ್ನು ಹೆಚ್ಚಿಸಿದೆ.
ಭಾರತದಲ್ಲಿ ಅತಿ ಹೆಚ್ಚು ಸಿಹಿತಿಂಡಿ ಉತ್ಪಾದಿಸುವ ರಾಜ್ಯ ಯಾವುದು?
ಭಾರತದಲ್ಲಿ ಅತಿ ಹೆಚ್ಚು ಸಿಹಿತಿನಿಸುಗಳನ್ನು ಉತ್ಪಾದಿಸುವ ರಾಜ್ಯ ಉತ್ತರ ಪ್ರದೇಶವನ್ನು ಕರೆಯಲಾಗುತ್ತದೆ. ಏಕೆಂದರೆ ಈ ರಾಜ್ಯ ಹೆಚ್ಚಿನ ಸಂಖ್ಯೆಯ ಸಿಹಿತಿಂಡಿ ಅಂಗಡಿಗಳನ್ನು ಹೊಂದಿದೆ ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಅಪಾರ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಆಗ್ರಾ ಮತ್ತು ಕಾನ್ಪುರದಂತಹ ನಗರಗಳು ವಿಶೇಷವಾಗಿ ದೊಡ್ಡ ಸಿಹಿ ಮಾರುಕಟ್ಟೆಗಳು ಮತ್ತು ಉತ್ಪಾದನಾ ಘಟಕಗಳಿಗೆ ಹೆಸರುವಾಸಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ