ತುಮಕೂರು, ಏಪ್ರಿಲ್ 16: ಪಾಶ್ಚಿಮಾತ್ಯ ದೇಶಗಳ ಯುದ್ಧದ ನಡುವೆ ಸದ್ಯ ಎಲ್ಲವೂ ದುಬಾರಿ ಎಂಬಂತಾಗಿದೆ. ಎಲ್ಪಿಜಿ ಗ್ಯಾಸ್ ಅಭಾವದ ಜೊತೆಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ನಡುವೆ ಈಗ ಕಲ್ಪತರು ನಾಡು ತುಮಕೂರಿನ ಕೊಬ್ಬರಿಗೂ (Coconut) ಬಂಗಾರದ ಬೆಲ ಬಂದಿದ್ದು, ಐತಿಹಾಸಿಕ ದಾಖಲೆ ಮೊತ್ತ ತಲುಪಿದೆ. ಹೀಗಿದ್ದರೂ ತೆಂಗು ರೈತನ ಮುಖದಲ್ಲಿ ಮಂದಹಾಸ ಮೂಡಿಲ್ಲ.
ಕೊಬ್ಬರಿಗೆ ಡಿಮ್ಯಾಂಡ್
ಪಾಶ್ಚಿಪಾತ್ಯ ದೇಶಗಳಾದ ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರ್ಮೋಡದ ನಡುವೆ ಇತರೆ ರಾಷ್ಟ್ರಗಳಲ್ಲಿ ಸಮಸ್ಯೆ ಎದುರಾಗಿವೆ. ಅದೇ ರೀತಿ ಭಾರತ ಹಾಗೂ ನಮ್ಮ ರಾಜ್ಯ ಕರ್ನಾಟಕ ಸಹ ಈ ಸಮಸ್ಯೆಗಳಿಗೆ ಹೊರತಾಗಿಲ್ಲ. ವಿವಿಧ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಕಲ್ಪತರು ನಾಡು ಎಂದೇ ಖ್ಯಾತಿ ಪಡೆದ ತುಮಕೂರಿನಲ್ಲಿ ಕೊಬ್ಬರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಲೆ 38 ಸಾವಿರ ರೂ ತಲುಪಿದೆ.
ಕ್ವಿಂಟಾಲ್ 38 ಸಾವಿರಕ್ಕೆ ಕೊಬ್ಬರಿ ಹರಾಜು
ಅಸಲಿಗೆ ಕ್ವಿಂಟಾಲ್ ಕೊಬ್ಬರಿಗೆ 38 ಸಾವಿರ ರೂ ಮೊತ್ತ ತಲುಪಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ. ಈ ಹಿಂದೆ ಹಾವು ಏಣಿಯಂತೆ ಏರಿಳಿತ ಕಾಣುತಿದ್ದ ಕೊಬ್ಬರಿ ಬೆಲೆ ಅಬ್ಬಾಬ ಎಂದರೇ 32 ಸಾವಿರ ರೂ ತಲುಲಿದರೇ ಹೆಚ್ಚು ಎನ್ನುತಿದ್ದರು. ಆದರೆ ತಿಪಟೂರಿನಲ್ಲಿ ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಾಲ್ 38 ಸಾವಿರಕ್ಕೆ ಕೊಬ್ಬರಿ ಹರಾಜಾಗಿದ್ದು, ಸರ್ವಕಾಲಿಕ ದಾಖಲೆ ಸರಿಗಟ್ಟಿದೆ.
ಭರ್ಜರಿ ಬೆಲೆ ಬಂದರೂ ರೈತರಿಗಿಲ್ಲ ಖುಷಿ
ಈ ಬೆಲೆ ಏರಿಕೆ ಮಾತ್ರ ಕೊಬ್ಬರಿ ಅವಲಂಬಿತ ತೆಂಗು ಬೆಳಗಾರರಲ್ಲಿ ಅಷ್ಟರ ಮಟ್ಟಿಗೆ ಸಂತಸ ಮೂಡಿಸಿಲ್ಲ. ಕಾರಣ ಇಳುವರಿ ಕಡಿಮೆ. ತೆಂಗು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ನಾನಾ ರೀತಿಯ ರೋಗಗಳಿಗೆ ಪರಿಹಾರ ತಿಳಿಯದೇ ಬೆಳೆಗಾರರು ಕಂಗಾಲಾದರೆ, ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಆಲಿಸುತ್ತಿಲ್ಲ. ಹೀಗಾಗಿ ತೆಂಗು ಬೆಳೆಯ ಇಳುವರಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾದರೂ ಲಾಭವಿಲ್ಲ ಎನ್ನುತ್ತಾರೆ ರೈತರು. ಮತ್ತೊಂದೆಡೆ ವ್ಯಾಪಾರಿಗಳಿಗೂ ಸಹ ಬೆಲೆ ಏರಿಕೆ ಲಾಭ ಅಷ್ಟಕಷ್ಟೇ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೊಬ್ಬರಿಗೆ ಬಂಪರ್ ಬೆಲೆ: ರೈತರಿಗೆ ಸಿಗದ ಲಾಭ, ಭಾರೀ ನಿರೀಕ್ಷೆಯಲ್ಲಿದ್ದ ಅನ್ನದಾತ ನಿರಾಸೆ
ಒಟ್ಟಾರೆ, ಇತರೆ ವಸ್ತುಗಳ ಬೆಲೆ ಏರಿಕೆ ನಡುವೆ ಈಗ ಕಲ್ಪತರು ನಾಡು ತುಮಕೂರಿನಲ್ಲೂ ಸಹ ಕೊಬ್ಬರಿ ಬೆಲೆ ಗಗನಕ್ಕೇರಿದ್ದು, ಖರೀದಿ ಬಲು ದುಬಾರಿ ಎಂಬಂತಾಗಿದೆ. ಈ ಬೆಲೆಗೆ ನಷ್ಟ ಕಡಿಮೆಯಾಗುತ್ತದೇ ಹೊರತು ಲಾಭವಿಲ್ಲ ಎನ್ನುವುದು ರೈತರ ಮಾತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 10:14 pm, Thu, 16 April 26