Headlines

ತಮಿಳುನಾಡು: ವಾಲ್ಪಾರೈ ಘಾಟ್​ನಲ್ಲಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ವ್ಯಾನ್, ಕೇರಳದ 9 ಮಂದಿ ಸಾವು – Kannada News | Tamil Nadu Valparai Ghat Road Accident: 9 Tourists from Kerala Killed as Van Plunges into Deep Gorge Near Pollachi

ಕೊಯಮತ್ತೂರು, ಏಪ್ರಿಲ್ 18: ತಮಿಳುನಾಡಿನ (Tamil Nadu) ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ (Valparai Ghat) ರಸ್ತೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿದ್ದರಿಂದ ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ.

ಮೃತರನ್ನು ಅಜಿತಾ (54), ರಮ್ಲಾ (52), ಸುಹ್ರಾ (43), ಆಶಾ (41), ಮಜೀತ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಂ (12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಕೇರಳದ ಪೆರಿಂತಲ್ಮಣ ಮೂಲದ 13 ಸದಸ್ಯರ ತಂಡ ವಾಲ್ಪಾರೈ ಪ್ರವಾಸ ಮುಗಿಸಿ ವಾಪಸಾಗುತ್ತಿತ್ತು. ಚಾಲಕ ಸೇರಿದಂತೆ 13 ಮಂದಿ ಈ ಪ್ರವಾಸಿಗರ ಗುಂಪಿನ ಭಾಗವಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಭಾರಿ ತಿರುವಿನಲ್ಲಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಸಂಜೆ 5:15ರ ಸುಮಾರಿಗೆ 13ನೇ ಹೇರ್ ಪಿನ್ ಬೆಂಡ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಿಂದ ಕೆಳಕ್ಕೆ ಜಾರಿ 9ನೇ ಹೇರ್ ಪಿನ್ ಬೆಂಡ್ ವರೆಗೆ ಉರುಳಿದೆ. ಕಡಿದಾದ ಭೂಪ್ರದೇಶ ಮತ್ತು ದಟ್ಟ ಅರಣ್ಯದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಎನ್​ಡಿಎಗೆ ದೊಡ್ಡ ಸೋಲು; ಮಹಿಳಾ ಮೀಸಲಾತಿ ಮಸೂದೆಗೆ ಸಿಗದ ಬಹುಮತ

ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್ ಜಿ. ಗಿರಿಯಪ್ಪನವರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಡಂಪರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ತಿಳಿದು ತುಂಬಾ ದುಃಖವಾಯಿತು. ಈ ಅಪಘಾತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿಯವರು ಸಂದೇಶದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *