ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ
ಪುಣೆ, ಏಪ್ರಿಲ್ 18: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pune) ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ರನ್‌ವೇ ಮೇಲೆ ಅನಿರೀಕ್ಷಿತವಾಗಿ ಸ್ಥಗಿತಗೊಂಡ ಪರಿಣಾಮ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.
ಏನಿದು ಘಟನೆ?
ಶುಕ್ರವಾರ ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ಯುದ್ಧ ವಿಮಾನವೊಂದು ವಾಡಿಕೆಯ ತರಬೇತಿ ಹಾರಾಟದ ನಂತರ ಭೂಸ್ಪರ್ಶ ಮಾಡುವಾಗ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದ ಅಡಿಭಾಗದ ಚಕ್ರಗಳ ವ್ಯವಸ್ಥೆಯಲ್ಲಿ (Undercarriage) ತಾಂತ್ರಿಕ ವೈಫಲ್ಯ ಉಂಟಾದ ಪರಿಣಾಮ ಅದು ರನ್‌ವೇ ಮೇಲೆಯೇ ನಿಂತುಬಿಟ್ಟಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.
ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ ವಾಯುಪಡೆ, ವಿಮಾನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿಯಾಗಿಲ್ಲ. ರನ್‌ವೇ ಪುನಃ ಕಾರ್ಯಾಚರಣೆಗೆ ತರುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿತು. ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಅಗತ್ಯ ಭದ್ರತಾ ಪರಿಶೀಲನೆಗಳ ನಂತರ ರನ್‌ವೇ ಮತ್ತೆ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಘೋಷಿಸಿತು.
ಪುಣೆ ವಿಮಾನ ನಿಲ್ದಾಣವು ದ್ವಂದ್ವ ಬಳಕೆ ವ್ಯವಸ್ಥೆಯಲ್ಲಿದ್ದು, ಲೋಹೇಗಾಂವ್ ವಾಯುಪಡೆ ಕೇಂದ್ರದೊಂದಿಗೆ ನಾಗರಿಕ ವಿಮಾನಗಳೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮವಾಗಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್‌ವೇ ಕ್ಲಿಯರ್ ಮಾಡಲು 4 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು.
ವಿಮಾನಯಾನದ ಮೇಲೆ ಭಾರಿ ಹೊಡೆತ
ಈ ಅವಧಿಯಲ್ಲಿ ಅನೇಕ ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದುಪಡಿಸಲಾಯಿತು. ಇಂಡಿಗೋ 31 ಆಗಮನ ಮತ್ತು 34 ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದರೆ, ಏರ್ ಇಂಡಿಯಾ ಮೂರು ಆಗಮನ ಮತ್ತು ಮೂರು ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದೆ. ಸ್ಪೈಸ್ ಜೆಟ್ ಹಾಗೂ ಆಕಾಶ ಏರ್ ತಲಾ ಎರಡು ಆಗಮನ ಮತ್ತು ಮೂರು ನಿರ್ಗಮನಗಳನ್ನು ರದ್ದುಪಡಿಸಿದವು. ಏರ್ ಇಂಡಿಯಾ ಎಕ್ಸ್ಪರೆಸ್ ಐದು ಆಗಮನ ಮತ್ತು ಐದು ನಿರ್ಗಮನಗಳನ್ನು ರದ್ದುಪಡಿಸಿದೆ.
Travel Advisory
Due to the unavailability of the runway at Pune airport, some flights to and from Pune may be impacted.
We understand this may affect your travel plans, and we’re here to support you every step of the way.
• We recommend checking your flight status before…
— IndiGo (@IndiGo6E) April 17, 2026
ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣ ಸಲಹೆ ಹೊರಡಿಸಿದ್ದು, ವಿಮಾನ ಸ್ಥಿತಿ ಪರಿಶೀಲಿಸಿ ಬಳಿಕವೇ ವಿಮಾನ ನಿಲ್ದಾಣಕ್ಕೆ ಬರಲು ಮನವಿ ಮಾಡಿದೆ. ಪರ್ಯಾಯ ಬುಕ್ಕಿಂಗ್ ಅಥವಾ ಸಂಪೂರ್ಣ ಹಣ ಮರುಪಾವತಿ ಆಯ್ಕೆಯನ್ನೂ ನೀಡಲಾಗಿದೆ.
ಇದನ್ನೂ ಓದಿ ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?
ಸಚಿವರ ಭರವಸೆ
ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು. ಯುದ್ಧ ವಿಮಾನವನ್ನು ತೆರವುಗೊಳಿಸಿ, ರನ್‌ವೇ ಪರೀಕ್ಷೆ ನಡೆಸಿದ ನಂತರ ಶನಿವಾರ ಬೆಳಗಿನ ಜಾವದ ವೇಳೆಗೆ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.
ಪ್ರಯಾಣಿಕರಿಗೆ ಸೂಚನೆ
ವಿಮಾನ ರದ್ದತಿಯಿಂದ ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ‘ಪ್ಲಾನ್ ಬಿ’ ಅಡಿಯಲ್ಲಿ ಪೂರ್ಣ ಹಣ ಮರುಪಾವತಿ ಅಥವಾ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದೆ. ಹವಾಮಾನ ಅಥವಾ ಇಂತಹ ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ