IPL 2026: ಐಪಿಎಲ್ನ 26ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಾಲಿಗೆ ಕೇವಲ ಒಂದು ಪಂದ್ಯವಲ್ಲ, ಅದೊಂದು ಭಾವನಾತ್ಮಕ ಮೈಲಿಗಲ್ಲು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ಈ ತಂಡ, ಇಂದು (ಏಪ್ರಿಲ್ 18, 2026) ತನ್ನ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 100ನೇ ಐಪಿಎಲ್ ಪಂದ್ಯವನ್ನಾಡುತ್ತಿದೆ.
ಡಬಲ್ ವಿಶೇಷ:
ವಿಶೇಷವೆಂದರೆ, 18 ವರ್ಷಗಳ ಹಿಂದೆ ಅಂದರೆ 2008ರ ಏಪ್ರಿಲ್ 18ರಂದೇ ಆರ್ಸಿಬಿ ತಂಡವು ಐಪಿಎಲ್ನ ಮೊಟ್ಟಮೊದಲ ಪಂದ್ಯವಾಡಿತ್ತು. ಅಂದರೆ ಚೊಚ್ಚಲ ಐಪಿಎಲ್ನ ಮೊದಲ ಪಂದ್ಯ ನಡೆದಿದ್ದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಅಂದು ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು.
ಇದೀಗ ಬರೋಬ್ಬರಿ 19 ವರ್ಷಗಳ ಬಳಿಕ ಆರ್ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 100ನೇ ಪಂದ್ಯವಾಡುತ್ತಿದೆ. ಅದು ಸಹ ಏಪ್ರಿಲ್ 18 ರಂದೇ ಎಂಬುದೇ ವಿಶೇಷ. ಅಂದರೆ ಐಪಿಎಲ್ನ ಮೊದಲ ಪಂದ್ಯವಾಡಿದ ದಿನಾಂಕದಂದೇ ಆರ್ಸಿಬಿ 100ನೇ ಪಂದ್ಯವಾಡುತ್ತಿದೆ.
ಐತಿಹಾಸಿಕ ಮೈಲುಗಲ್ಲು:
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾವುದೇ ತಂಡ ಒಂದೇ ಮೈದಾನದಲ್ಲಿ 100 ಪಂದ್ಯಗಳನ್ನಾಡಿಲ್ಲ ಎಂಬುದು ವಿಶೇಷ.
- ಮುಂಬೈ ಇಂಡಿಯನ್ಸ್ (MI): ಮುಂಬೈನ ವಾಂಖೆಡೆ ಕ್ರೀಡಾಂಗಣವು ಅತಿ ಹೆಚ್ಚು ಐಪಿಎಲ್ ಪಂದ್ಯಗಳಿಗೆ (ಸುಮಾರು 126) ಆತಿಥ್ಯ ನೀಡಿದ್ದರೂ, ಮುಂಬೈ ತಂಡವು ಅಲ್ಲಿ ಆಡಿರುವುದು 92 ಮ್ಯಾಚ್ಗಳನ್ನು ಮಾತ್ರ.
- ಕೋಲ್ಕತ್ತಾ ನೈಟ್ ರೈಡರ್ಸ್ (KKR): ಈಡನ್ ಗಾರ್ಡನ್ಸ್ ಮೈದಾನವು 100ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಕಂಡಿದೆ, ಆದರೆ ಕೆಕೆಆರ್ ತಂಡವು ಅಲ್ಲಿ ಆಡಿರುವ ಪಂದ್ಯಗಳ ಸಂಖ್ಯೆ 95 ಮಾತ್ರ.
- ಚೆನ್ನೈ ಸೂಪರ್ ಕಿಂಗ್ಸ್ (CSK): ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಸಿಎಸ್ಕೆ ಇದುವರೆಗೆ ಸುಮಾರು 92 ಪಂದ್ಯಗಳನ್ನು ಆಡಿದೆ.
ಅಂದರೆ ಐಪಿಎಲ್ನ ಯಶಸ್ವಿ ಮೂರು ತಂಡಗಳು ತವರಿನಲ್ಲಿ 100 ಪಂದ್ಯಗಳನ್ನಾಡಿದ ಸಾಧನೆ ಮಾಡಿಲ್ಲ. ಇದೀಗ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಳ್ಳಲು ಆರ್ಸಿಬಿ ಸಜ್ಜಾಗಿ ನಿಂತಿದೆ. ಅದರಂತೆ ಇಂದು ಕಣಕ್ಕಿಳಿಯುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ.
ಚಿನ್ನಸ್ವಾಮಿಯಲ್ಲಿ RCB ದಾಖಲೆ ಹೇಗಿದೆ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 99 ಪಂದ್ಯಗಳನ್ನಾಡಿದೆ. ಈ ವೇಳೆ ಆರ್ಸಿಬಿ 48 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 46 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನುಳಿದ 5 ಮ್ಯಾಚ್ಗಳು ಕಾರಣಾಂತರಗಳಿಂದ ರದ್ದಾಗಿದ್ದವು.
ಇದನ್ನೂ ಓದಿ: ಅಂದು RCB ಆಟಗಾರನ ಹೀಯಾಳಿಸಿ ಇಂದು ದೂರು ನೀಡಿದ CSK
2026ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಒಟ್ಟು 5 ಪಂದ್ಯಗಳನ್ನು ಆಡಿದೆ. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 3 ಪಂದ್ಯಗಳಲ್ಲೂ ಆರ್ಸಿಬಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಮ್ಯಾಚ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಅದರಂತೆ ನೂರನೇ ಪಂದ್ಯದಲ್ಲಿ ಆರ್ಸಿಬಿ ಸ್ಮರಣೀಯ ಗೆಲುವು ತನ್ನದಾಗಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
Published On – 10:58 am, Sat, 18 April 26