ಟೆಹರಾನ್, ಏಪ್ರಿಲ್ 19: ಜಗತ್ತಿನ ಶೇ. 20 ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ (hormuz strait) ಅಮೆರಿಕ ಹಾಗೂ ಇರಾನ್ ಮಧ್ಯೆ ತಡೆಗಾಗಿ ಜಂಗೀಕುಸ್ತಿ ನಡೆದಿದೆ. ನೀವು ಪಟ್ಟುಹಾಕಿದರೆ ನಾ ಪಟ್ಟು ಹಾಕುತ್ತೇನೆ ಎಂಬಂತಾಗಿದೆ. ಅಮೆರಿಕದ ನೌಕಾಪಡೆಯು ಈ ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕಿದ ಬಳಿಕ ತನ್ನ ಮುಷ್ಟಿಯನ್ನು ಸಡಿಲಿಸಿದ್ದ ಇರಾನ್ ಇದೀಗ ಮತ್ತೊಮ್ಮೆ ತಡೆ ಹಾಕಿದೆ. ಜಲಸಂಧಿಯಲ್ಲಿ ಇರುವ ಅಮೆರಿಕನ್ ನೌಕೆಗಳಿಗೆ ಈಗ ಇರಾನ್ನ ‘ಸೊಳ್ಳೆ ಪಡೆ’ಗಳ (Iran’s mosquito fleet) ಕಾಟ ಶುರುವಾಗಿದೆ. ಈ ಸಣ್ಣ ಸಣ್ಣ ದೋಣಿಗಳ ಉಪಟಳಕ್ಕೆ ಅಮೆರಿಕದವರು ಹೈರಾಣಾಗಿ ಹೋಗುತ್ತಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಮೆರಿಕದ ಪ್ರಯತ್ನ ಪದೇ ಪದೇ ವಿಫಲವಾಗುತ್ತಿದೆ. ಇರಾನ್ನ ದೊಡ್ಡ ಹಡಗುಗಳನ್ನು ಹೊಡೆದುಹಾಕುವ ಅಮೆರಿಕಕ್ಕೆ ಈ ಸಣ್ಣ ದೋಣಿಗಳು ಬಹಳ ಅಪಾಯಕಾರಿ ಎನಿಸಿವೆ.
ಇದನ್ನೂ ಓದಿ: ‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು
ಇರಾನ್ನ ಸೊಳ್ಳೆ ಪಡೆ ದೋಣಿಗಳು ಯಾಕೆ ಅಪಾಯಕಾರಿ?
ವಿಹಾರಕ್ಕೆಂದು ಬಳಸಲಾಗುವ ದೋಣಿಗಳನ್ನೇ ಇರಾನ್ ಮಾರ್ಪಡಿಸಿಕೊಂಡು ಸಂಗ್ರಾಮಕ್ಕೆ ಬಳಸುತ್ತಿದೆ. ಈ ದೋಣಿಗಳಿಗೆ ರಾಕೆಟ್ ಚಾಲಿತ ಗ್ರೆನೇಡ್ ಬಾಂಬುಗಳನ್ನು ಉಡಾಯಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಇನ್ನೂ ಹಲವು ದೋಣಿಗಳಲ್ಲಿ ಮೆಷೀನ್ ಗನ್ಗಳಿರುತ್ತವೆ. ಇವು ಬಹಳ ವೇಗವಾಗಿ ಸಾಗಿ ಹೋಗಬಲ್ಲುವು. 100 ನಾಟ್ವರೆಗಿನ ವೇಗ ಅಥವಾ ಗಂಟೆಗೆ 185 ಕಿಮೀವರೆಗಿನ ವೇಗದಲ್ಲಿ ಇವು ಓಡಬಲ್ಲುವು.
ಇರಾನ್ನ ಸರ್ವೋಚ್ಚ ನಾಯಕರ ವೈಯಕ್ತಿಕ ಸೈನ್ಯ ಪಡೆಯಾದ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ ಈ ದೋಣಿ ಪಡೆಗಳನ್ನು ನಿಭಾಯಿಸುತ್ತದೆ. ಈ ಸೇನೆ ಅಸಾಂಪ್ರದಾಯಿಕ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿದೆ. ಅದರ ವಿವಿಧ ರಣತಂತ್ರಗಳಲ್ಲಿ ಈ ಸೊಳ್ಳೆ ದೋಣಿ ತಂತ್ರವೂ ಇದೆ.
ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಸಂಚಲನ, ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ ‘ದೋಸ್ತಿ’ ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು
ಹಾಗೆಯೇ, ಇರಾನ್ನ ಸೊಳ್ಳೆ ಪಡೆಗಳಲ್ಲಿ ಸಣ್ಣ ಸಬ್ಮರೈನ್ಗಳು ಹಾಗೂ ಡ್ರೋನ್ಗಳೂ ಇವೆ. ಇವುಗಳನ್ನು ಟ್ರ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ. ಸೆಟಿಲೈಟ್ಗಳ ಕಣ್ಣಿಗೆ ಇವು ಅಷ್ಟು ಸುಲಭಕ್ಕೆ ಬೀಳುವುದಿಲ್ಲ. ಇರಾನ್ನ ಸೊಳ್ಳಿ ಪಡೆಯಲ್ಲಿ ಈ ಸಣ್ಣ ಸಣ್ಣ ದೋಣಿಗಳು, ಪುಟ್ಟ ಸಬ್ಮರೈನ್ಗಳು, ಡ್ರೋನ್ಗಳು, ಮಿಸೈಲ್ಗಳು ಮೊದಲಾದವು ಇವೆ. ಬಹಳ ಕ್ಷಿಪ್ರವಾಗಿ ಸಾಗಿ ಹಡಗುಗಳ ಮೇಲೆ ಆಕ್ರಮಣ ಮಾಡಿ, ಅಷ್ಟೇ ಬೇಗವಾಗಿ ಇವು ವಾಪಸ್ ಹೋಗಬಲ್ಲುವು. ಹೀಗಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಗೆ ಇರಾನ್ನ ಸೊಳ್ಳೆ ಪಡೆ ಮಗ್ಗುಲಮುಳ್ಳಾಗಿ ಪರಿಣಮಿಸಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ