Headlines

ದಕ್ಷಿಣ ಭಾರತ ಚಲನಚಿತ್ರ ನಿರ್ಮಾಪಕರ ಒಕ್ಕೂಟ ಸಭೆ: ಮಹತ್ವದ ನಿರ್ಧಾರ – Kannada News | Telugu, Tamil and Malayalam movie Producers meeting took important decisions

ಚಿತ್ರರಂಗದ (Movie) ಸಮಸ್ಯೆಗಳ ಬಗ್ಗೆ ಅದರಲ್ಲೂ ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಯುತ್ತಲೇ ಇವೆ. ತೆಲುಗು ನಿರ್ಮಾಪಕರು, ಕೇರಳ ನಿರ್ಮಾಪಕರು ಈ ಬಗ್ಗೆ ಸರ್ಕಾರಗಳೊಟ್ಟಿಗೆ ಸಹ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್​​ನಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಪ್ರಮುಖ ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ಮಾಪಕರ ಸಂಘಗಳ ಪ್ರತಿನಿಧಿಗಳು ಒಂದು ಮಹತ್ವದ ಸಭೆ ನಡೆಸಿದರು. ಚಲನಚಿತ್ರ ನಿರ್ಮಾಣ ಕ್ಷೇತ್ರ ಎದುರಿಸುತ್ತಿರುವ ಗಂಭೀರ ಸವಾಲುಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಗೆ ಕರ್ನಾಟಕದ ನಿರ್ಮಾಪಕರು ಭಾಗಿ ಆಗಿರಲಿಲ್ಲ ಎನ್ನಲಾಗುತ್ತಿದೆ.

ಚಿತ್ರಮಂದಿರಗಳ ಪ್ರದರ್ಶನ ನಿಯಮಗಳು ಅಥವಾ 8 ವಾರಗಳ OTT ವಿಂಡೋ ಕುರಿತು ಇತರ ಪಾಲುದಾರರು ಯಾವುದೇ ಪೂರ್ವ ಸಮಾಲೋಚನೆ ಇಲ್ಲದೆ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳನ್ನು ಸಭೆಯು ಸರ್ವಾನುಮತದಿಂದ ಖಂಡಿಸಿದೆ. ನಿರ್ಮಾಪಕರ ಹಿತಾಸಕ್ತಿಗಳನ್ನು ದೀರ್ಘಕಾಲದವರೆಗೆ ರಕ್ಷಿಸಲು ‘ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರ ಸಂಘ’ (South Indian Film Producers Association – SIFPA) ಎಂಬ ಸಂಸ್ಥೆಯನ್ನು ರಚಿಸಲು ಒಪ್ಪಿಗೆ ಸೂಚಿಸಲಾಗಿದೆ.

ದಕ್ಷಿಣ ಭಾರತದ ಭಾಷಾ ಚಿತ್ರರಂಗದ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಚಿತ್ರರಂಗದ ತಕ್ಷಣದ ಸವಾಲುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಾಲ್ಕೂ ಭಾಷಾ ಚಿತ್ರರಂಗಗಳ ನಡುವೆ ಸಮನ್ವಯ ಸಾಧಿಸುತ್ತದೆ. ಸದ್ಯಕ್ಕೆ ಯಾವುದೇ ಸಂಘಟನೆ ಅಥವಾ ವಲಯ ವಿಧಿಸುವ ನಿಯಮಗಳಿಗೆ ಬದ್ಧರಾಗದೆ, ನಿರ್ಮಾಪಕರು ತಮ್ಮ ಚಿತ್ರೀಕರಣ ಪ್ರಕ್ರಿಯೆ, ಹಕ್ಕುಗಳ ಮಾರಾಟ ಮತ್ತು ಬಿಡುಗಡೆಯ ವೇಳಾಪಟ್ಟಿಯನ್ನು ಸ್ವತಂತ್ರವಾಗಿ ಮುಂದುವರಿಸಲು ಸೂಚಿಸಲಾಗಿದೆ.

ಇದನ್ನೂ ಓದಿ:‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

OTT ಬಿಡುಗಡೆಯ ಸಮಯಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರಗಳಿಗೆ ಸಹಿ ಮಾಡದಂತೆ ನಿರ್ಮಾಪಕ ಸದಸ್ಯರಿಗೆ ವಿಶೇಷವಾಗಿ ಸಲಹೆ ನೀಡಲಾಗಿದೆ. ಆರ್ಥಿಕ ಹಿತದೃಷ್ಟಿಯಿಂದ ಇಂತಹ ನಿರ್ಧಾರಗಳನ್ನು ಸಾಮೂಹಿಕ ಚರ್ಚೆಯ ನಂತರವೇ ತೆಗೆದುಕೊಳ್ಳಲಾಗುವುದು ಎಂದು ಸಭೆ ತೀರ್ಮಾನಿಸಿದೆ. ಸಭೆಯ ಕುರಿತು ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಕರ್ನಾಟಕದ ನಿರ್ಮಾಪಕರು ಭಾಗಿ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಕರ್ನಾಟಕದ ನಿರ್ಮಾಪಕರಿಗೆ ಆಹ್ವಾನ ಇತ್ತೋ ಇಲ್ಲವೊ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:29 pm, Sun, 19 April 26

Source link

Leave a Reply

Your email address will not be published. Required fields are marked *