ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಮತ್ತು ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪವನ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದು, ಪವನ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದೀಗ ಪವನ್ ಪತ್ನಿ ಮತ್ತು ಅವರ ಸಹೋದರ ಮೆಗಾಸ್ಟಾರ್ ಚಿರಂಜೀವಿ ಅವರು ಪವನ್ ಕಲ್ಯಾಣ್ ಅವರ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದು, ‘ಆತಂಕದ ಅವಶ್ಯಕತೆ ಇಲ್ಲ’ ಎಂದಿದ್ದಾರೆ.
ಸಣ್ಣ ಆರೋಗ್ಯದ ಸಮಸ್ಯೆಗಳಿಂದಾಗಿ ವೈದ್ಯರ ಸಲಹೆಯ ಮೇರೆಗೆ ಪವನ್ ಕಲ್ಯಾಣ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ಮುಗಿದಿದೆ. ತಮ್ಮ ಪತಿಯ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಅನ್ನಾ ಲೆಜ್ನೋವಾ ಅವರು, ‘ಪವನ್ ಕಲ್ಯಾಣ್ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಶಸ್ತ್ರಚಿಕಿತ್ಸೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಪವನ್ ಕಲ್ಯಾಣ್ ಅವರ ಸಹೋದರ ಚಿರಂಜೀವಿ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಕಲ್ಯಾಣ್ ಬಾಬು (ಪವನ್ ಕಲ್ಯಾಣ್) ಅವರು ಸಣ್ಣ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಅವರು ಸುರಕ್ಷಿತವಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಪ್ರಕಾರ, ಅವರು ತಮ್ಮ ಸಾಮಾನ್ಯ ದಿನಚರಿಗೆ ಮರಳಲು ಸುಮಾರು ಒಂದು ವಾರ ತೆಗೆದುಕೊಳ್ಳಬಹುದು. ಯಾರೂ ಚಿಂತಿಸಬೇಕಿಲ್ಲ. ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ಅವರಿಗೆ ಪ್ರಾರ್ಥಿಸೋಣ’ ಎಂದಿದ್ದಾರೆ.
ಇದನ್ನೂ ಓದಿ;ಪವನ್ ಕಲ್ಯಾಣ್ ಬಗ್ಗೆ ಹಾಸ್ಯ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪೊಲೀಸರ ವಶಕ್ಕೆ
ನಟ ಅಲ್ಲು ಅರ್ಜುನ್, ರಾಮ್ ಚರಣ್ ಇನ್ನೂ ಕೆಲವರು ಪವನ್ ಕಲ್ಯಾಣ್ ಅವರಿಗಾಗಿ ಟ್ವೀಟ್ ಮಾಡಿದ್ದು, ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಪವನ್ ಕಲ್ಯಾಣ್ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎನ್ನಲಾಗುತ್ತಿದ್ದು, ಸುಮಾರು ಒಂದು ವಾರಗಳ ಅವರು ಯಾವುದೇ ರಾಜಕೀಯ ಅಥವಾ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗಿ ಆಗದಿರುವ ವೈದ್ಯರು ಸಲಹೆ ನೀಡಿದ್ದಾರೆ.
ಪವನ್ ಕಲ್ಯಾಣ್ ಅವರು ರಾಜಕೀಯ ಮತ್ತು ಚಿತ್ರರಂಗ ಎರಡನ್ನೂ ಏಕಕಾಲಕ್ಕೆ ನಿಭಾಯಿಸುತ್ತಿದ್ದಾರೆ. ಕಳೆದ ತಿಂಗಳು ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಿ ಉತ್ತಮ ಗಳಿಕೆ ಮಾಡಿತ್ತು. ಇದೀಗ ಅವರು ‘ಓಜಿ 2’ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ