ಕೊಚ್ಚಿ, ಏ.20: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ (FCRA) ಮಸೂದೆಗೆ ಸಂಬಂಧಿಸಿದಂತೆ ಸಿರೋ-ಮಲಬಾರ್ ಚರ್ಚಿನ ಧರ್ಮಗುರು ಫಾದರ್ ಪಾಲ್ ತೇಲಕ್ಕಾಟ್ ನೀಡಿರುವ ಹೇಳಿಕೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. “ಕ್ರೈಸ್ತ ಚರ್ಚ್ಗಳು ದೇವಸ್ಥಾನಗಳಂತೆ ಹಣ ಅಥವಾ ಆಸ್ತಿಯನ್ನು ಕೂಡಿಡುವುದಿಲ್ಲ” ಎಂಬ ಅವರ ಹೇಳಿಕೆ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫಾದರ್ ಪಾಲ್ ತೇಲಕ್ಕಾಟ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಚರ್ಚ್ಗಳು ತಮ್ಮಲ್ಲಿರುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಗೆ ಬಳಸುತ್ತವೆ. ಸಾಯಿಬಾಬಾ ಮತ್ತು ಮಾತಾ ಅಮೃತಾನಂದಮಯಿ ಅವರ ಸಂಸ್ಥೆಗಳು ಸಹ ಇದೇ ರೀತಿಯ ಸೇವಾ ಮನೋಭಾವ ಹೊಂದಿವೆ. ದೇವಸ್ಥಾನಗಳಲ್ಲಿ ಎಷ್ಟು ಪ್ರಮಾಣದ ಚಿನ್ನವನ್ನು ಕೂಡಿಡಲಾಗಿದೆ ಎಂಬುದನ್ನು ನೋಡಿ. ಈ ಚಿನ್ನವನ್ನು ಜನರ ಏಳಿಗೆಗಾಗಿ ಬಳಸಬೇಕೇ ಹೊರತು ನೆಲಮಾಳಿಗೆಗಳಲ್ಲಿ ಲಾಕ್ ಮಾಡಿ ಇಡಬಾರದು.
ಮಧುರೈ ಮೀನಾಕ್ಷಿ ದೇವಸ್ಥಾನ ಮತ್ತು ತಿರುಪತಿ ದೇವಸ್ಥಾನಗಳ ಆದಾಯ ಮತ್ತು ಚಿನ್ನದ ಸಂಗ್ರಹದ ಕುರಿತು ಆನ್ಲೈನ್ನಲ್ಲಿ ಲಭ್ಯವಿರುವ ಮಾಹಿತಿಯನ್ನು ಅವರು ಉಲ್ಲೇಖಿಸಿ, “ಜನಸೇವೆಯೇ ಜನಾರ್ದನ ಸೇವೆ” ಎನ್ನುವುದು ನಮ್ಮ ಆದರ್ಶ ಎಂದರು. ಎನ್ಜಿಒಗಳಿಗೆ ಬರುವ ವಿದೇಶಿ ದೇಣಿಗೆಯನ್ನು ತಡೆಯುವ ಉದ್ದೇಶದ FCRA ಮಸೂದೆಯು ಕ್ರೈಸ್ತರು ಸೇವೆ ಮಾಡಬಾರದು ಎಂಬ ಒತ್ತಾಯದ ಹೇರಿಕೆಯಾಗಿದೆ ಎಂದು ಅವರು ಕಿಡಿಕಾರಿದರು.
ಫಾದರ್ ಪಾಲ್ ಅವರ ಹೇಳಿಕೆಗೆ ಹಿಂದೂ ಐಕ್ಯ ವೇದಿ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರ ಪ್ರತಿಕ್ರಿಯೆ ನೀಡಿವೆ. ದೇವಸ್ಥಾನದ ಆಸ್ತಿಗಳು ಭಕ್ತರು ನೀಡಿದ ಕಾಣಿಕೆಗಳೇ ಹೊರತು ವಿದೇಶದಿಂದ ಅಕ್ರಮವಾಗಿ ತಂದಿದ್ದಲ್ಲ. ಅದನ್ನು ಏನು ಮಾಡಬೇಕು ಎಂಬುದು ಹಿಂದೂಗಳಿಗೆ ಬಿಟ್ಟ ವಿಚಾರ” ಎಂದು ಐಕ್ಯ ವೇದಿಯ ಅಧ್ಯಕ್ಷ ಆರ್.ವಿ. ಬಾಬು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: “ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ
ಕೋಟ್ಯಂತರ ರೂಪಾಯಿಗಳ ವಿದೇಶಿ ದೇಣಿಗೆ ಮತ್ತು ಅಕ್ರಮ ಹಣವನ್ನು ಬಳಸಿ ಹಿಂದೂಗಳನ್ನು ಮತಾಂತರಿಸುವುದನ್ನು ಮೊದಲು ನಿಲ್ಲಿಸಲಿ. ಕ್ರೈಸ್ತ ಧಾರ್ಮಿಕ ಮೂಲಭೂತವಾದಿಗಳು ಮತ್ತು ಜಿಹಾದಿಗಳು ದೇವಸ್ಥಾನದ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಹಿಂದೂ ಸಂಘಟನೆಗಳನ್ನು ತಮ್ಮ ಹಾದಿಗೆ ಅಡ್ಡಿ ಎಂದು ಭಾವಿಸುವ ಗುಂಪುಗಳು ಪೋರ್ಚುಗೀಸ್ ಮತ್ತು ಮೊಘಲ್ ಸಂಪ್ರದಾಯಗಳನ್ನು ಮುಂದುವರಿಸಲು ಬಯಸುತ್ತಿವೆ ಎಂದು ಸಂಘಟನೆಗಳು ಟೀಕಿಸಿವೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ