ನರೇಂದ್ರ ಮೋದಿ ಇನ್ಸ್ಟಾ ವಿಡಿಯೋಗಳುImage Credit source: Narendra Modi’s Insta
ಕೋಲ್ಕತಾ, ಏಪ್ರಿಲ್ 20: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ (West Bengal Assembly Elections) ಪ್ರಚಾರದ ಅಬ್ಬರದ ನಡುವೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಏಪ್ರಿಲ್ 19, 2026) ಝಾರ್‌ಗ್ರಾಮ್‌ನಲ್ಲಿ (Jhargram) ಸಾಮಾನ್ಯ ಜನರಂತೆ ರಸ್ತೆ ಬದಿಯ ಅಂಗಡಿಗೆ ಭೇಟಿ ನೀಡಿ ಝಲ್ಮುರಿ (Jhalmuri) ಸವಿದಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಕೇವಲ 24 ಗಂಟೆಗಳಲ್ಲಿ 100 ಮಿಲಿಯನ್ಗೂ (10 ಕೋಟಿ) ಅಧಿಕ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲದ ಜನಪ್ರಿಯತೆ ತನಗಿದೆ ಎಂಬುದನ್ನು ಪ್ರಧಾನಿಗಳು ಮತ್ತೊಮ್ಮೆ ಸಾಬೀತುಪಡಿಸಿದಂತಿದೆ.
ಏನಿದು ಪ್ರಧಾನಿಗಳ ಝಲ್ಮುರಿ ಘಟನೆ?
ಸತತ ನಾಲ್ಕು ಚುನಾವಣಾ ರ‍್ಯಾಲಿಗಳನ್ನು ಮುಗಿಸಿ ಮರಳುತ್ತಿದ್ದ ಪ್ರಧಾನಿ, ಇದ್ದಕ್ಕಿದ್ದಂತೆ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಸ್ಥಳೀಯ ವ್ಯಾಪಾರಿ ವಿಕ್ರಮ್ ಸಾಹ ಅವರ ಝಲ್ಮುರಿ ಅಂಗಡಿಗೆ ತೆರಳಿದರು. ಝಲ್ಮುರಿ ಸವಿಯುತ್ತಾ ವ್ಯಾಪಾರಿಯೊಂದಿಗೆ ಆತ್ಮೀಯವಾಗಿ ಮಾತನಾಡಿದ ಮೋದಿ, “ನಾವು ಎಲ್ಲವನ್ನೂ ತಿನ್ನುತ್ತೇವೆ, ಆದರೆ ಜನರ ತಲೆ ತಿನ್ನುವುದಿಲ್ಲ” (Hum sab kuch khate hai, dimaag nahi khate bas) ಎಂದು ತಮಾಷೆ ಮಾಡಿದ್ದು ನೆಟ್ಟಿಗರ ಮನ ಗೆದ್ದಿದೆ. ವ್ಯಾಪಾರಿ ವಿಕ್ರಮ್ ಸಾಹ ಅವರು ಹಣ ಪಡೆಯಲು ನಿರಾಕರಿಸಿದರೂ, ಪ್ರಧಾನಿಯವರು ಪಟ್ಟು ಹಿಡಿದು 10 ರೂಪಾಯಿ ಪಾವತಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್ಮುರಿ’ ಸವಿ; ಝಾರ್‌ಗ್ರಾಮ್‌ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ
ಸಾಮಾಜಿಕ ಜಾಲತಾಣದಲ್ಲಿ ದಾಖಲೆ
ಪ್ರಧಾನಿ ಮೋದಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ತಕ್ಷಣವೇ ಅದು ವೈರಲ್ ಆಗಿದೆ. ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿದ್ದು, ಪ್ರಧಾನಿಯವರ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. “ಮೋದಿ ಜೀ ಕೂಡ ಝಲ್ಮುರಿಯನ್ನು ಅಪ್ರೂವ್ ಮಾಡಿದ್ದಾರೆ” ಎಂಬಂತಹ ತಮಾಷೆಯ ಕಾಮೆಂಟ್‌ಗಳು ಹರಿದಾಡುತ್ತಿವೆ.
ಪ್ರಧಾನಿಯ ಇನ್ಸ್ಟಾ ವಿಡಿಯೋ
ರಾಜಕೀಯ ಸಂಚಲನ
ಒಂದೆಡೆ ಈ ವಿಡಿಯೋ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್ (TMC) ಈ ಭೇಟಿಯನ್ನು ಟೀಕಿಸಿದೆ. ಮೋದಿಯವರ ಈ ಭೇಟಿಯಿಂದಾಗಿ ಹೆಲಿಕಾಪ್ಟರ್ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಹೇಮಂತ್ ಸೊರೇನ್ ಅವರಂತಹ ಇತರ ನಾಯಕರ ಪ್ರಚಾರಕ್ಕೆ ಅಡ್ಡಿಯಾಯಿತು ಎಂದು ಟಿಎಂಸಿ ಆರೋಪಿಸಿದೆ. ಪ್ರಧಾನಿಯವರ ‘ಝಲ್ಮುರಿ’ ಪ್ರಸಂಗವನ್ನು ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದು, ಇದೆಲ್ಲಾ ಬರೀ ಡ್ರಾಮಾ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್
ಆದರೆ, ರಾಜಕೀಯ ಏನೇ ಇರಲಿ, ಪ್ರಧಾನಿಯವರ ಈ “ಸ್ಟ್ರೀಟ್ ಫುಡ್ ಡಿಪ್ಲೊಮಸಿ” ಮಾತ್ರ ಡಿಜಿಟಲ್ ಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ