ಐಪಿಎಲ್ 2026 (IPL 2026) ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಗುಜರಾತ್ ಟೈಟಾನ್ಸ್ (MI vs GT) ತಂಡವನ್ನು ಎದುರಿಸಿತ್ತು. ಈ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ ಮುಂಬೈ ಮುಂದಿನ ಹಂತವನ್ನು ತಲುಪಬೇಕೆಂದರೆ ಉಳಿದ ಎಲ್ಲಾ ಪಂದ್ಯವನ್ನು ಗೆಲ್ಲಬೇಕು. ಅದರಂತೆ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ತಿಲಕ್ ವರ್ಮಾ ಅವರ ಸ್ಫೋಟಕ ಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 199 ರನ್ ಕಲೆಹಾಕಿತು. ಈ ಮೂಲಕ ಗುಜರಾತ್ ಗೆಲುವಿಗೆ 200 ರನ್ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 100 ರನ್ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 99 ರನ್ಗಳಿಂದ ಪಂದ್ಯವನ್ನು ಸೋತಿತು.
ಮುಂಬೈಗೆ ಆರಂಭಿಕ ಆಘಾತ
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 30 ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಮ್ಮ ಅಭಿಮಾನಿಗಳ ಮುಂದೆ ಹೀನಾಯ ಸೋಲನ್ನು ಅನುಭವಿಸಿತು. ಆದಾಗ್ಯೂ, ಪಂದ್ಯ ಪ್ರಾರಂಭವಾದಾಗ, ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಗುಜರಾತ್ ವೇಗಿ ಕಗಿಸೊ ರಬಾಡ, ಪವರ್ಪ್ಲೇನಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ 3 ವಿಕೆಟ್ಗಳನ್ನು ಉರುಳಿಸಿದರು. ಆದರೆ ಆ ನಂತರ ನಮನ್ ಧೀರ್ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 100 ರನ್ಗಳ ಹತ್ತಿರಕ್ಕೆ ತಂದರು.
ತಿಲಕ್ ಸ್ಫೋಟಕ ಶತಕ
ಇದಾದ ನಂತರ, ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸವನ್ನು ತಿಲಕ್ ವರ್ಮಾ ಮಾಡಿದರು. ಹಿಂದಿನ 5 ಪಂದ್ಯಗಳಲ್ಲಿ ಕೇವಲ 43 ರನ್ ಗಳಿಸಿದ್ದ ತಿಲಕ್, ಈ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿದರು. ಒಂದು ಹಂತದಲ್ಲಿ, ತಿಲಕ್ 22 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ದರು. ಆದರೆ ಇಲ್ಲಿಂದ ಗೇರ್ ಬದಲಿಸಿದ ತಿಲಕ್ ಬೌಂಡರಿಗಳ ಮಳೆಗರೆದರು. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾದರು. ತಿಲಕ್ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಐಪಿಎಲ್ನಲ್ಲಿ ತಮ್ಮ ಮೊದಲ ಶತಕವನ್ನು ಪೂರೈಸಿದರು.
Published On – 11:14 pm, Mon, 20 April 26