ಮಾನವನ ಜೀವನದಲ್ಲಿ ದೈವಾನುಗ್ರಹ ಮತ್ತು ತಂದೆ-ತಾಯಿಗಳ ಆಶೀರ್ವಾದ ಎಷ್ಟು ಮುಖ್ಯವೋ, ಅಷ್ಟೇ ಪ್ರಮುಖವಾದದ್ದು ಗುರುವಿನ ಅನುಗ್ರಹ. ಹುಟ್ಟಿದಾಗಿನಿಂದ ಸಾವಿನ ತನಕ, ಅಂದರೆ ಉಸಿರು ಪ್ರಾರಂಭವಾದಾಗಿನಿಂದ ನಿಲ್ಲುವವರೆಗೂ ಗುರುವಿನ ಮಾರ್ಗದರ್ಶನ ಅನಿವಾರ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, “ಹರ ಮುನಿದರೂ ಗುರು ಕಾಯುವನು” ಎಂಬ ಮಾತು ಗುರುವಿನ ಮಹತ್ವವನ್ನು ಸಾರುತ್ತದೆ. ದೇವರುಗಳ ಅನುಗ್ರಹ ಸಿಗದೆ ಇದ್ದರೂ, ಗುರುವು ನಮ್ಮನ್ನು ಕಾಯುತ್ತಾನೆ ಎಂಬುದು ನಮ್ಮ ಹಿಂದೂ ಸನಾತನ ಸಂಪ್ರದಾಯದ ನಂಬಿಕೆ. ನಾವು ಹುಟ್ಟಿದಾಗ ತಂದೆ-ತಾಯಿಗಳೇ ಮೊದಲ ಗುರುಗಳು. ನಂತರ, ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಕರು, ಮತ್ತು ಉದ್ಯೋಗ ಅಥವಾ ಜೀವನ ನಿರ್ವಹಣೆಯ ಕಾಲದಲ್ಲಿ ಮಾರ್ಗದರ್ಶನ ನೀಡುವವರು ಗುರುಗಳಾಗಿರುತ್ತಾರೆ. ಯಾರು ಗುರುಗಳ ಆಶ್ರಯವನ್ನು ಪಡೆಯುತ್ತಾರೋ ಅವರ ಜೀವನವು ಪರಿಪೂರ್ಣ ಮತ್ತು ಸಮಾಧಾನವಾಗಿರುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ. ಜೀವಂತ ಗುರುಗಳು ಇರಬಹುದು, ಇಲ್ಲವೇ ದೈವಾಧೀನರಾಗಿದ್ದರೂ ಅವರ ದೈವಾಂಶವನ್ನು ಪಡೆದು ನಮ್ಮ ಜೊತೆ ಇರುವ ಮಹಾತ್ಮರು ಇರಬಹುದು.
ವೇದವ್ಯಾಸರು, ದತ್ತಾತ್ರೇಯರು, ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವಣ್ಣನವರು, ಸಾಯಿಬಾಬಾ, ಶ್ರೀಧರ ಸ್ವಾಮಿಗಳು, ರಾಘವೇಂದ್ರ ಸ್ವಾಮಿಗಳು, ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು, ವಿವೇಕಾನಂದರು, ಅರವಿಂದ ಸ್ವಾಮಿಗಳು, ಹಾಗೂ ದಾಸವರೇಣ್ಯರಾದ ಪುರಂದರದಾಸರು ಮತ್ತು ಕನಕದಾಸರು-ಇವರೆಲ್ಲರೂ ನಮ್ಮ ಆಧ್ಯಾತ್ಮಿಕ ಗುರುಗಳೇ. ನಿಮಗೆ ಇಷ್ಟವಾದ ಗುರುವಿನ ತತ್ವಗಳನ್ನು ಅನುಸರಿಸಿದಾಗ ಜೀವನದ ಯಾವ ಕಷ್ಟಗಳೂ ನಿಮ್ಮ ಬಳಿಗೆ ಬರುವುದಿಲ್ಲ. ಗುರುವಿನ ಕೃಪೆ ಇದ್ದರೆ ನವಗ್ರಹ ದೋಷಗಳು ಬಾಧಿಸುವುದಿಲ್ಲ ಮತ್ತು ಯಾವುದೇ ವಿಚಿತ್ರ ಪೂಜೆ-ಪುನಸ್ಕಾರಗಳ ಅವಶ್ಯಕತೆಯೂ ಇರುವುದಿಲ್ಲ.
ಗುರು ಎಂಬ ಪದಕ್ಕೆ “ಗು” ಎಂದರೆ ಅಂಧಕಾರ, “ಋ” ಎಂದರೆ ಅದನ್ನು ಹೋಗಲಾಡಿಸುವವನು ಎಂಬ ಅರ್ಥವಿದೆ. ಗುರುಪೂರ್ಣಿಮೆಯನ್ನು ವರ್ಷಕ್ಕೊಮ್ಮೆ ಆಚರಿಸುವುದರ ಜೊತೆಗೆ, ಪ್ರತಿನಿತ್ಯವೂ ಗುರುವಿನ ಸ್ಮರಣೆ ಮಾಡುವುದು ಮುಖ್ಯ. ಗುರು ದರ್ಶನ, ನಂತರ ಇಷ್ಟದೇವರ ದರ್ಶನ, ಮತ್ತು ಜೀವಂತ ತಂದೆ-ತಾಯಿಗಳ ಅಥವಾ ಅವರ ನೆನಪಿನ ಸ್ಮರಣೆ, ದೈವ ಸ್ಮರಣೆ ಮಾಡಿಕೊಂಡ ವ್ಯಕ್ತಿಗೆ ಅಪಮೃತ್ಯು ಹತ್ತಿರ ಬರುವುದಿಲ್ಲ. ಕಷ್ಟಗಳಿಂದ ಪಾರಾಗಲು ಅನುಗ್ರಹ ಸಿಗುತ್ತದೆ. “ಗುರು ಬ್ರಹ್ಮ ಗುರು ವಿಷ್ಣು ಗುರುರ್ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂಬ ಶ್ಲೋಕವು ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮಾನನಾಗಿ ಚಿತ್ರಿಸುತ್ತದೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಗುರುಗಳು, ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ ಅವರ ಗದ್ದುಗೆಗಳ ಮೂಲಕವೂ ಪ್ರಭಾವ ಬೀರುತ್ತಾರೆ. ಈ ಗದ್ದುಗೆಗಳ ಸುತ್ತಲೂ ಒಂದು ಪ್ರಭಾವಳಿ, ವಿಶೇಷ ಆಕರ್ಷಣ ಶಕ್ತಿ ಇರುತ್ತದೆ, ಅದು ಋಣಾತ್ಮಕ ಶಕ್ತಿಗಳನ್ನು ಹೋಗಲಾಡಿಸುತ್ತದೆ. ಪ್ರತಿನಿತ್ಯ ಐದು ನಿಮಿಷಗಳ ಕಾಲ ಗುರುವಿನ ಸ್ಮರಣೆ ಮಾಡಿಕೊಂಡರೆ ಎಲ್ಲವೂ ಶುಭವಾಗುತ್ತದೆ. ಪರಮಹಂಸರು ಮತ್ತು ರಮಣ ಮಹರ್ಷಿಗಳಂತಹ ಮಹನೀಯರನ್ನು ಸ್ಮರಿಸಿದಾಗ ಅವರ ಅನುಗ್ರಹ ದೊರೆಯುತ್ತದೆ. ರಾಮಕೃಷ್ಣ ಮಠದ ಸ್ವಾಮಿಗಳ ಮುಖದಲ್ಲಿ ಕಾಣುವ ತೇಜಸ್ಸು ಗುರುವಿನ ಅನುಗ್ರಹದ ಫಲವೇ. “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” – ಆತ್ಮದ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ ಪ್ರಯತ್ನಿಸುವವರು ಭಗವಂತನಿಗೆ ಪ್ರಿಯರು. ಆದ್ದರಿಂದ, ನಮ್ಮ ಜೀವನದಲ್ಲಿ ಗುರುವಿನ ಅನುಗ್ರಹವನ್ನು ಪಡೆದು, ಸರಿಯಾದ ಮಾರ್ಗವನ್ನು ಅನುಸರಿಸಿದರೆ ಜೀವನದಲ್ಲಿ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ