Can Daily Mouthwash Raise Blood Pressure? Study Findings ExplainedImage Credit source: Getty Images
ಇತ್ತೀಚಿನ ದಿನಗಳಲ್ಲಿ ಬಾಯಿಯ ಸ್ವಚ್ಛತೆಗೆ ಮೌತ್‌ವಾಶ್ (Mouthwash) ಬಳಕೆ ಹೆಚ್ಚಾಗಿದೆ. ವಿಶೇಷವಾಗಿ ಯುವಜನರಲ್ಲಿ ಇದರ ಬಳಕೆ ಟ್ರೆಂಡ್ ಆಗುತ್ತಿದೆ. ಆದರೆ, ಇತ್ತೀಚಿನ ಸಂಶೋಧನೆ ಒಂದು ಅಚ್ಚರಿ ಮೂಡಿಸುವ ಮಾಹಿತಿಯನ್ನು ಹೊರತಂದಿದ್ದು, ಮೌತ್‌ವಾಶ್ ಅತಿಯಾಗಿ ಬಳಸುವುದರಿಂದ ಹೈ ಬ್ಲಡ್ ಪ್ರೆಶರ್ (High Blood Pressure) ಅಪಾಯ ಹೆಚ್ಚಾಗಬಹುದು ಎಂದು ಸೂಚಿಸಿದೆ. ಹೌದು, ಇದು ಆಶ್ಚರ್ಯ ಹುಟ್ಟಿಸಿದರೂ ಸತ್ಯ. ಕೆಲವರಿಗೆ ಮೌತ್‌ವಾಶ್ ಬಳಸುವುದಕ್ಕೆ ತುಂಬಾ ಖುಷಿಯಾಗುತ್ತದೆ. ಎಲ್ಲೇ ಹೋಗುವುದಾದರೂ ಬ್ರಶ್ ಜೊತೆಗೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಬಳಸಿ ಬಳಸಿ ಅಭ್ಯಾಸವಾಗಿರುತ್ತದೆ. ಆದರೆ ಇದರ ಬಳಕೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದನ್ನು ಯಾರೂ ಕೂಡ ಊಹಿಸಿರುವುದಿಲ್ಲ. ಹಾಗಾಗಿ ಹೊಸ ಸಂಶೋಧನೆ ಹೇಳುವುದೇನು, ಮೌತ್‌ವಾಶ್ ಬಳಕೆಯಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಂಶೋಧನೆ ಏನು ಹೇಳುತ್ತದೆ?
ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಮ್ಮ ಬಾಯಿಯಲ್ಲಿ ಹಲವು ಉತ್ತಮ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ವಿಶ್ರಾಂತಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಕೆಲವು ಮೌತ್‌ವಾಶ್‌ಗಳಲ್ಲಿ ಇರುವ ಬಲವಾದ ಆಂಟಿಬ್ಯಾಕ್ಟೀರಿಯಲ್ ರಸಾಯನಗಳು ಈ ಉತ್ತಮ ಬ್ಯಾಕ್ಟೀರಿಯಾಗಳನ್ನೂ ನಾಶ ಮಾಡಬಹುದು. ಇದರಿಂದ ನೈಟ್ರಿಕ್ ಆಕ್ಸೈಡ್ ಉತ್ಪಾದನೆ ಕಡಿಮೆಯಾಗಬಹುದು ಮತ್ತು ಹೈ ಬಿಪಿ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೌತ್ ವಾಶ್ ಬಳಸುತ್ತೀರಾ? ಕ್ಯಾನ್ಸರ್ ಬರಬಹುದು ಎಚ್ಚರ
ಎಲ್ಲಾ ಮೌತ್‌ವಾಶ್‌ಗಳು ಹಾನಿಕರವೇ?
ಎಲ್ಲಾ ಮೌತ್‌ವಾಶ್‌ಗಳಿಂದ ಅಪಾಯವಿಲ್ಲ. ಹೆಚ್ಚು ಬಲವಾದ ಆಂಟಿಬ್ಯಾಕ್ಟೀರಿಯಲ್ ಅಂಶಗಳಿರುವ ಮೌತ್‌ವಾಶ್‌ಗಳಿಂದ ಮಾತ್ರ ಸಮಸ್ಯೆ ಉಂಟಾಗಬಹುದು. ಮೃದುವಾದ ಅಥವಾ ಕಡಿಮೆ ರಸಾಯನಗಳಿರುವ ಮೌತ್‌ವಾಶ್‌ಗಳನ್ನು ನಿಯಮಿತವಾಗಿ, ಆದರೆ ಮಿತವಾಗಿ ಬಳಸುವುದು ಸುರಕ್ಷಿತ ಎಂದು ತಜ್ಞರು ತಿಳಿಸಿದ್ದಾರೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮೌತ್‌ವಾಶ್ ಬಳಸುವವರಿಗೆ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ದಿನದಲ್ಲಿ ಮೂರು ಅಥವಾ ನಾಲ್ಕು ಬಾರಿ ಬಳಸುವವರು ಹೆಚ್ಚು ಅಪಾಯಕ್ಕೆ ಒಳಗಾಗಬಹುದು. ಇದು ಬಾಯಿಯ ಉತ್ತಮ ಬ್ಯಾಕ್ಟೀರಿಯಾ ನಾಶವಾಗಲು ಕಾರಣವಾಗುತ್ತದೆ.
ಬಾಯಿಯ ಆರೋಗ್ಯ ಕಾಪಾಡಲು ಸರಳ ಸಲಹೆಗಳು:
- ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವುದು
- ಫ್ಲಾಸಿಂಗ್ ಅಭ್ಯಾಸ ಮಾಡುವುದು
- ವರ್ಷಕ್ಕೆ ಕನಿಷ್ಠ ಒಂದು ಬಾರಿ ಡೆಂಟಲ್ ಚೆಕ್‌ಅಪ್ ಮಾಡಿಸುವುದು
- ವೈದ್ಯರ ಸಲಹೆಯಂತೆ ಮಾತ್ರ ಮೌತ್‌ವಾಶ್ ಬಳಸುವುದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ