ಮೃತ ಕಿರಣ್ (ಎಡಚಿತ್ರ) ಹಾಗೂ ಆರೋಪಿImage Credit source: tv9
ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ (Bengaluru) ಬ್ಯಾಡರಹಳ್ಳಿಯಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಜೀವಂತ ದಹನ ಮಾಡಿದ (Byadarahalli Murder Case) ಭೀಕರ ಘಟನೆಗೆ ಸಂಬಂಧಿಸಿದಂತೆ ಈಗ ಮತ್ತಷ್ಟು ಆಘಾತಕಾರಿ ವಿಚಾರಗಳು ಬಯಲಾಗಿವೆ. ಪ್ರಿಯಕರ ಕಿರಣ್ನನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ಪ್ರೇಮಾ ಸ್ಕೆಚ್ ಹಾಕಿದ್ದಳು ಎಂಬ ಸ್ಫೋಟಕ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ. ಅಲ್ಲದೆ, ಅದಕ್ಕಾಗಿ ಏನೇನು ಸಿದ್ಧತೆ ಮಾಡಿಕೊಂಡಿದ್ದಳು ಎಂಬುದೂ ಗೊತ್ತಾಗಿದೆ.
ಸಾವಿಗೆ ಶರಣಾಗಲು ಮಾಡಿಕೊಂಡಿದ್ದಳು ಸಕಲ ಸಿದ್ಧತೆ!
ಪ್ರಿಯಕರ ಕಿರಣ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಪ್ರೇಮಾ ಕೂಡ ಅದೇ ಬೆಂಕಿಯಲ್ಲಿ ಆಹುತಿಯಾಗಲು ನಿರ್ಧರಿಸಿದ್ದಳು. ಒಂದು ವೇಳೆ ಬೆಂಕಿಯಿಂದ ಬದುಕುಳಿದರೆ ಆತ್ಮಹತ್ಯೆ ಮಾಡಿಕೊಳ್ಳಲು ರೂಮಿನಲ್ಲಿ ವಿಷದ ಬಾಟಲಿ ಹಾಗೂ ಮಾತ್ರೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಳು. ಆದರೆ, ಕಿರಣ್ ಬೆಂಕಿಯಲ್ಲಿ ನರಳುತ್ತಾ ಕಿರುಚಾಡುತ್ತಿದ್ದಾಗ ಬೆಂಕಿಯ ತೀವ್ರತೆ ಹೆಚ್ಚಾದ ಕಾರಣ ಪ್ರೇಮಾ ಭಯಬಿದ್ದು ಹೊರಕ್ಕೆ ಓಡಿ ಬಂದಿದ್ದಾಳೆ. ಅರೆಬರೆ ಬಟ್ಟೆಯಲ್ಲಿದ್ದ ಆಕೆಯನ್ನು ಕಂಡು ಪಕ್ಕದ ಮನೆಯ ಮಹಿಳೆ ಮಾನವೀಯತೆಯ ದೃಷ್ಟಿಯಿಂದ ಬಟ್ಟೆ ನೀಡಿ ರಕ್ಷಿಸಿದ್ದರು.
ಕೊಲೆಗೆ ಪ್ರಚೋದನೆ ನೀಡಿದ್ದು ‘ಮಾಜಿ ಲವರ್’ ಫೋಟೋ!
ಕಳೆದ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದ ಕಿರಣ್ ಮತ್ತು ಪ್ರೇಮಾ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಕಿರಣ್, ಪ್ರೇಮಾಳನ್ನು ಕಡೆಗಣಿಸಿ ತನ್ನ ಹಳೆಯ ಪ್ರಿಯತಮೆಯ ಜೊತೆ ಮತ್ತೆ ಸಂಪರ್ಕದಲ್ಲಿದ್ದ. ಮಾಜಿ ಪ್ರಿಯತಮೆಯ ಹುಟ್ಟುಹಬ್ಬವನ್ನು ಆಚರಿಸಿ ಕಿರಣ್ ಫೋಟೋಗಳನ್ನು ತೆಗೆಸಿಕೊಂಡಿದ್ದ. ಇದನ್ನು ಕಂಡು ಆಕ್ರೋಶಗೊಂಡ ಪ್ರೇಮಾ ಕಿರಣ್ ಜೊತೆ ಜಗಳವಾಡಿದ್ದಳು. ಕಿರಣ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದರಿಂದ ಸೇಡು ಮತ್ತಷ್ಟು ಹೆಚ್ಚಾಗಿತ್ತು.
ಆನ್ಲೈನ್ನಲ್ಲಿ ಹ್ಯಾಂಡ್ಕಪ್ ಖರೀದಿ
‘ನೀನು ಹೇಳಿದ ದಿನವೇ ನಾವು ಮದುವೆಯಾಗೋಣ’ ಎಂದು ನಂಬಿಸಿ ಕಿರಣ್ನನ್ನು ಪ್ರೇಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಕೇವಲ ಎರಡು ದಿನಗಳಲ್ಲಿ ಕೊಲೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದ ಈಕೆ, ಆನ್ಲೈನ್ನಲ್ಲಿ ಹ್ಯಾಂಡ್ಕಪ್ (ಕೈಕೋಳ) ಬೆಲ್ಟ್ ಖರೀದಿಸಿದ್ದಳು ಎನ್ನಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಪ್ರೇಮಾಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಆರಂಭದಲ್ಲಿ, ಕಿರಣ್ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಪ್ರೇಮಾಳೇ ಕೈಕಾಲು ಕಟ್ಟಿ ಆತನಿಗೆ ಬೆಂಕಿ ಹಚ್ಚಿದ್ದು ದೃಢಪಟ್ಟಿದೆ. ಪ್ರೀತಿಯಲ್ಲಿ ಉಂಟಾದ ಬಿರುಕು ಮತ್ತು ಕಿರಣ್ ಮತ್ತೊಬ್ಬ ಯುವತಿಯ ಜೊತೆ ಸಂಬಂಧ ಹೊಂದಿದ್ದೇ ಈ ಕಗ್ಗೊಲೆಗೆ ಮೂಲ ಕಾರಣ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ