ಬೆಂಗಳೂರು, (ಏಪ್ರಿಲ್ 23): ಎಸ್ಎಸ್ಎಲ್ಸಿ ಫಲಿತಾಂಶ (SSLC Results 2026) ಪ್ರಕಟವಾಗಿದ್ದು, ಕಳೆದ ವರ್ಷ 80.04ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ ಈ ವರ್ಷ ಶೇ.94.01ರಷ್ಟು ಫಲಿತಾಂಶದೊಂದಿಗೆ ಶೇ.14ರಷ್ಟು ಫಲಿತಾಂಶ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಅಂದರೆ 35ನೇ ಸ್ಥಾನದಲ್ಲಿದೆ. ಆದರೂ ಕಳೆದ ವರ್ಷಕ್ಕಿಂತ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಇನ್ನು ಕಲಬುರಗಿ (Kalaburagi) ಕೊನೆ ಸ್ಥಾನದಲ್ಲಿರುವುದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ (Priyank Kharge) ವಿರುದ್ಧ ಮುಗಿಬಿದ್ದಿವೆ. ಇನ್ನು ಇದಕ್ಕೆ ಖರ್ಗೆ ಸಹ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ನಿಮಗೆ ಸಮಸ್ಯೆ ಇದ್ರೆ ನನ್ನ ನಿಂದಿಸಿ, ಮಕ್ಕಳ ಅಪಹಾಸ್ಯವೇಕೆ? ಎಂದು ಪ್ರಶ್ನಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಅಂದರೆ 35 ಸ್ಥಾನ ಪಡೆದುೊಂಡಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ವ್ಯಂಗ್ಯ ಮಾಡಿದ್ದು, ಇದಕ್ಕೆ ಪ್ರಿಯಾಂಕ್ ಖರ್ಗೆ ಸಹ ಸಾಮಾಜಿಕ ತಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸ್ತಿದೆ. ಅವರ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಅಡಗಿಸುವ ಪ್ರಯತ್ನ. ನಿಮಗೆ ಸಮಸ್ಯೆ ಇದ್ರೆ ನನ್ನ ನಿಂದಿಸಿ, ಮಕ್ಕಳ ಅಪಹಾಸ್ಯವೇಕೆ? ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಪ್ರಿಯಾಂಕ್ ಖರ್ಗೆ ಗುರಿಯಾಗಿಸಿ ಬಿಜೆಪಿ, ಜೆಡಿಎಸ್ ವ್ಯಂಗ್ಯ
ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ, ಅವರ ಆತ್ಮಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ.
@BJP4Karnataka, ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ?
ಜಿಲ್ಲೆಯ ಶೇಕಡಾವಾರು ಫಲಿತಾಂಶ 85% ಇರಬಹುದು, ಕಳೆದ ಶೈಕ್ಷಣಿಕ… https://t.co/U4BFuTLPtR— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 23, 2026
ಕಲಬುರಗಿ ಜಿಲ್ಲೆಯ ಶೇಕಡಾವಾರು ಫಲಿತಾಂಶ 85%ರಷ್ಟಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಶೈಕ್ಷಣಿಕ ಗುಣಮಟ್ಟದ ಸುಧಾರಿಸಿಕೊಳ್ಳುವ ಶಕ್ತಿ ಮಕ್ಕಳಲ್ಲಿದೆ. ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸ್ತಿರುವ ಬಿಜೆಪಿ ರಾಜಕೀಯ ದಿವಾಳಿತನದಿಂದ ಕೂಡಿದೆ. ಕಲಬುರಗಿ ಬಿಜೆಪಿಗರ ಮಕ್ಕಳಿಗೂ ‘ದಡ್ಡರು ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ? ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿ ಕೊನೆ ಸ್ಥಾನದಲ್ಲಿದ್ರೂ ಸುಧಾರಣೆ
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕ್ರಮವಾಗಿ ಮೊದಲ, ಎರಡನೇ ಸ್ಥಾನದಲ್ಲಿವೆ. ಇನ್ನು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿಯೂ ಕಲಬುರಗಿ 29ನೇ ಸ್ಥಾನದಲ್ಲಿತ್ತು. ಆದ್ರೆ, ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕಿಂತ ಈ ಬಾರಿ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ.
ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ, ಉತ್ತರ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚು ಶ್ರಮ ಹಾಕಿದ ಪರಿಣಾಮ ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಜಿಲ್ಲೆಯ ಅಧಿಕಾರಿಗಳು ವಿಶೇಷ ಕ್ಲಾಸ್, ಕೆಲವು ನಿಯಮಗಳನ್ನು ರೂಪಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಕಾರಣವಾಗಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 8:29 pm, Thu, 23 April 26