ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada
ಬೆಂಗಳೂರು, ಏಪ್ರಿಲ್ 23: ಹಿರಿಯ ಐಎಎಸ್ ಅಧಿಕಾರಿಗಳ (IAS Officers) ಫೋಟೋ ಹಾಗೂ ಹೆಸರನ್ನು ಬಳಸಿಕೊಂಡು ಕಿಡಿಗೇಡಿಗಳು ನಕಲಿ ವಾಟ್ಸಾಪ್ ಖಾತೆಗಳನ್ನು ಸೃಷ್ಟಿಸಿ, ಸಹೋದ್ಯೋಗಿಗಳಿಗೆ ಹಾಗೂ ಇತರೆ ಅಧಿಕಾರಿಗಳಿಗೆ ಮೆಸೇಜ್ (message) ಕಳುಹಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಗಳಿಗೂ ಕಿಡಿಗೇಡಿಗಳು ಮೆಸೇಜ್ ಮಾಡಿದ್ದು, ಸದ್ಯ ಅಮೃತಹಳ್ಳಿ ಹಾಗೂ ವೈಟ್ಫೀಲ್ಡ್ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ವಿವಿಧ ವಲಯ ಆಯುಕ್ತರ ಫೋಟೋಗಳನ್ನು ತಮ್ಮ ವಾಟ್ಸಾಪ್ ಡಿಪಿ ಆಗಿ ಬಳಸಿಕೊಂಡಿರುವ ಆರೋಪಿಗಳು, ಹಲವು ಅಧಿಕಾರಿಗಳಿಗೆ “ಹೇಗಿದ್ದೀರಾ? ಎಲ್ಲಿದ್ದೀರಾ? ಏನು ಮಾಡುತ್ತಿದ್ದೀರಾ?” ಎಂದು ವೈಯಕ್ತಿಕವಾಗಿ ವಿಚಾರಿಸುವ ಮಾದರಿಯಲ್ಲಿ ಮೆಸೇಜ್ ಮಾಡಿದ್ದಾರೆ.
ಮಹಿಳಾ ಅಧಿಕಾರಿಗಳಿಗೂ ಕಿಡಿಗೇಡಿಗಳಿಂದ ಮೆಸೇಜ್
ಕೇವಲ ಪುರುಷ ಅಧಿಕಾರಿಗಳಷ್ಟೇ ಅಲ್ಲದೆ, ಮಹಿಳಾ ಅಧಿಕಾರಿಗಳಿಗೂ ಇಂತಹ ನಕಲಿ ಖಾತೆಗಳಿಂದ ಮೆಸೇಜ್ ಬಂದಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳ ಅಧಿಕೃತ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚನೆಗೆ ಅಥವಾ ತಪ್ಪು ಮಾಹಿತಿ ಹರಡಲು ಈ ರೀತಿ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬಾಗಲಕೋಟೆ ಕಾರ್ಮಿಕರ ಖಾತೆಗೆ ಕೋಟಿ ಕೋಟಿ ಹಣ: ಮುಂದಾಗಿದ್ದೇನು ಗೊತ್ತಾ?
ಅನಾಮಧೇಯ ವ್ಯಕ್ತಿಗಳಿಂದ ಬೇರೆ ಬೇರೆ ವ್ಯಕ್ತಿಗಳಿಗೆ ಮೆಸೇಜ್ ಕಳುಹಿಸುವ ಮೂಲಕ ಹಣಕಾಸಿನ ನೆರವು ಕೇಳುವ ಹಾಗೂ ಆರ್ಥಿಕ ಅಪರಾಧಗಳು ನಡೆಯುವ ಸಂಭವವಿರುತ್ತದೆ. ಹಾಗಾಗಿ ಅನಾಮಧೇಯವಾಗಿ ಮೆಸೇಜ್ ಮಾಡುತ್ತಿರುವುದನ್ನು ಕೂಡಲೇ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಕೃತ್ಯ ಎಸಗಿರುವಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳ ಸಹಾಯಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪೊಲೀಸರನ್ನೂ ಬಿಡದ ಸೈಬರ್ ವಂಚಕರು: ಬೆಂಗಳೂರಿನ ಹಲವು ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್!
ಸದ್ಯ ಈ ಸಂಬಂಧ ಈಗಾಗಲೇ ಬೆಂಗಳೂರಿನ ವೈಟ್ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಅಮೃತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಸದ್ಯ ಈ ಕಿಡಿಗೇಡಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.