ಐಪಿಎಲ್ 2026 ರಲ್ಲಿ ಅನೇಕ ಯುವ ಹಾಗೂ ಅನುಭವಿ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ತಮ್ಮ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದು ತಂಡದ ನಾಯಕರ ಯಶಸ್ಸಿಗೂ ಸಹಕಾರಿಯಾಗಿದೆ. ಆದರೆ ಇನ್ನು ಕೆಲವು ತಂಡಗಳಿಗೆ ನಾಯಕರೇ ಹೊರ ಆಗಿದ್ದಾರೆ. ಬ್ಯಾಟಿಂಗ್ ಅಥವಾ ಬೌಲಿಂಗ್ ಜೊತೆಗೆ ಅವರ ನಾಯಕತ್ವದ ನಿರ್ಧಾರಗಳು ಕೂಡ ತಂಡದ ಸೋಲಿಗೆ ಕಾರಣವಾಗುತ್ತಿವೆ.
ಹೀಗಾಗಿ ತಮ್ಮ ಕಳಪೆ ಪ್ರದರ್ಶನದಿಂದ ತಂಡಕ್ಕೆ ಹೊರೆಯಾಗಿರುವುದು ಕೇವಲ ಒಬ್ಬರು ಅಥವಾ ಇಬ್ಬರು ಅಲ್ಲ, ಬರೋಬ್ಬರಿ ಐದು ತಂಡಗಳ ನಾಯಕರಿದ್ದಾರೆ. ಈ ಐದು ತಂಡಗಳ ನಾಯಕರು ತಮ್ಮದೇ ತಂಡಗಳಿಗೆ ತಲೆನೋವಾಗುತ್ತಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ ಈ ಐದು ಆಟಗಾರರ ಖರೀದಿಗೆ ಬರೋಬ್ಬರಿ 76.85 ಕೋಟಿ ರೂ ವ್ಯಯಿಸಲಾಗಿದೆ. ಆದಾಗ್ಯೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಆಲ್ರೌಂಡರ್ ಆಗಿರುವ ಪಾಂಡ್ಯಗೆ ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ, ಇದರ ಪರಿಣಾಮವಾಗಿ ಮುಂಬೈ ಏಳು ಪಂದ್ಯಗಳಲ್ಲಿ ಕೇವಲ ಎರಡನ್ನು ಮಾತ್ರ ಗೆದ್ದಿದೆ. ತಂಡವು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಪಾಂಡ್ಯ 19.4 ರ ಸರಾಸರಿಯಲ್ಲಿ ಕೇವಲ 97 ರನ್ ಗಳಿಸಿದ್ದು, ಬೌಲಿಂಗ್ನಲ್ಲಿ ಕೇವಲ ಮೂರು ವಿಕೆಟ್ಗಳನ್ನು ಪಡೆದಿದ್ದಾರೆ. ಮುಂಬೈ ತಂಡ ಹಾರ್ದಿಕ್ ಪಾಂಡ್ಯ ಅವರಿಗೆ 16.35 ಕೋಟಿ ರೂ. ಸಂಭಾವನೆ ನೀಡುತ್ತದೆ.
ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕರಾದಾಗಿನಿಂದ, ರಿಷಭ್ ಪಂತ್ ತಮ್ಮ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಈ ಸೀಸನ್ನಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ 147 ರನ್ ಗಳಿಸಿದ್ದು, ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ. ಹೀಗಾಗಿ ಲಕ್ನೋ ತಂಡವು ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತಿದ್ದು, ಪಾಯಿಂಟ್ಗಳ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಪಂತ್ ಐಪಿಎಲ್ನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದು, 27 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಯುವ ನಾಯಕ ರಿಯಾನ್ ಪರಾಗ್ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ 81 ರನ್ ಗಳಿಸಿದ್ದಾರೆ. ಒಳ್ಳೆಯ ಸುದ್ದಿ ಏನೆಂದರೆ ರಿಯಾನ್ ಪರಾಗ್ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ ಇತರರ ಉತ್ತಮ ಪ್ರದರ್ಶನದಿಂದ ರಾಜಸ್ಥಾನ ರಾಯಲ್ಸ್ ಪ್ರಸ್ತುತ ಉತ್ತಮ ಸ್ಥಿತಿಯಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ತಂಡವು ರಿಯಾನ್ ಪರಾಗ್ಗೆ 14 ಕೋಟಿ ರೂ. ಸಂಬಳವನ್ನು ನೀಡುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಕೂಡ ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಏಳು ಪಂದ್ಯಗಳಲ್ಲಿ, ಗಾಯಕ್ವಾಡ್ ಕೇವಲ 104 ರನ್ ಗಳಿಸಿದ್ದಾರೆ. ಅವರು ಒಂದೇ ಒಂದು ಶತಕ ಅಥವಾ ಅರ್ಧಶತಕ ಗಳಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ಪಂದ್ಯದಲ್ಲೂ ಕಳಪೆ ಆರಂಭ ಪಡೆಯುತ್ತಿರುವುದಕ್ಕೆ ರುತುರಾಜ್ ಪ್ರಮುಖ ಕಾರಣರಾಗಿದ್ದಾರೆ. ಗಾಯಕ್ವಾಡ್ಗೆ ಚೆನ್ನೈ ಸೂಪರ್ ಕಿಂಗ್ಸ್ 18 ಕೋಟಿ ರೂ. ಸಂಭಾವನೆ ನೀಡುತ್ತದೆ.
ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಕೂಡ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ 152 ರನ್ ಗಳಿಸಿದ್ದಾರೆ. ಹೀಗಾಗಿ ಕೆಕೆಆರ್ ತಂಡವು ಆಡಿರುವ ಏಳು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ರಹಾನೆ ಪ್ರತಿ ಆವೃತ್ತಿಗೆ 1.5 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ.






