ಕೊಡೆರ್ಮಾ, ಏಪ್ರಿಲ್ 26: ಮಹಿಳೆಯೊಬ್ಬರು ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು, ರೈಲಿನಡಿ ಪ್ರಾಣಬಿಟ್ಟಿರುವ ಘಟನೆ ಜಾರ್ಖಂಡ್ನ ಕೊಡೆರ್ಮಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ 24 ವರ್ಷದ ಮಹಿಳೆ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿದಾಗ ಯುವತಿ ತನ್ನಿಬ್ಬರು ಮಕ್ಕಳೊಂದಿಗೆ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ.
ಆದರೆ, ಸಮತೋಲನ ತಪ್ಪಿದ ಅವರು ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವಲ್ಲಿ ಬಿದ್ದಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಕಿರುಚಾಡುವಷ್ಟರಲ್ಲೇ ರೈಲಿನ ಚಕ್ರಗಳು ಆಕೆಯ ಪ್ರಾಣಪಕ್ಷಿಯನ್ನು ಹಾರಿಸಿದ್ದವು. ಈ ದುರಂತದ ಅತ್ಯಂತ ಕಟು ಸತ್ಯವೆಂದರೆ ಆಕೆಯ ಜೊತೆಗಿದ್ದ ಇಬ್ಬರು ಮುಗ್ಧ ಮಕ್ಕಳು. ತಾಯಿ ಹಳಿಯ ಮೇಲೆ ಶವವಾಗಿ ಬಿದ್ದಿದ್ದರೆ, ಏನೂ ಅರಿಯದ ಆ ಮಕ್ಕಳು ಅಪರಿಚಿತರ ತೋಳುಗಳಲ್ಲಿ ಕುಳಿತು ಅಳುತ್ತಿರುವ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿದೆ.
ಘಟನೆಯ ನಂತರ ಕೊಡೆರ್ಮಾ ನಿಲ್ದಾಣದಲ್ಲಿ ಸ್ಮಶಾನ ಮೌನ ಆವರಿಸಿದೆ. ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಶಿಶು ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಮೃತ ಯುವತಿಯ ಕುಟುಂಬದವರನ್ನು ಪತ್ತೆಹಚ್ಚುವ ಕೆಲಸ ಮುಂದುವರೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ