Headlines

‘ನಿಮ್ಮ ಸಿನಿಮಾನಲ್ಲಿ ಹೀರೋ ಯಾರು?’ ಎಂದವರಿಗೆ ಸಮಂತಾ ಖಡಕ್ ಉತ್ತರ – Kannada News | Samantha Ruth Prabhu says she is hero in her movie Maa Inti Bangaram

ಸಮಂತಾ ಋತ್ ಪ್ರಭು (Samantha Ruth Prabhu), ದಕ್ಷಿಣದ ಸ್ಟಾರ್ ನಟಿ ಆಗಿ ಮೆರೆದವರು. ಕೆಲ ವರ್ಷಗಳ ಹಿಂದಿನ ವರೆಗೂ ಸಮಂತಾ ಕೈಯಲ್ಲಿ ಹಲವು ಸಿನಿಮಾ ಅವಕಾಶಗಳಿದ್ದವು. ಒಂದರ ಹಿಂದೊಂದು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದರು. ಆದರೆ ವಿಚ್ಛೇದನ, ಅದಾದ ಬಳಿಕ ತೀವ್ರ ಅನೋರಾಗ್ಯ, ಅದರ ಬಳಿಕ ಸಮಂತಾರ ವ್ಯಕ್ತಿತ್ವದಲ್ಲಾದ ಭಾರಿ ಬದಲಾವಣೆ ಇವುಗಳೆಲ್ಲದರ ನಂತರ ಹಠಾತ್ತನೆ ಸಮಂತಾಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ. ಇದೀಗ ಸಮಂತಾಗೆ ಅವರ ಹಾಲಿ ಪತಿ ಮಾತ್ರವೇ ಗತಿ ಎಂಬಂತಾಗಿದೆ. ಇದೀಗ ಸಮಂತಾ ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರವನ್ನು ಸಮಂತಾ ಈಗಾಗಲೇ ಆರಂಭಿಸಿದ್ದು, ಇದೀಗ ಸಮಂತಾ ಸಂದರ್ಶನವೊಂದರಲ್ಲಿ ‘ಮಾ ಇಂಟಿ ಬಂಗಾರಂ’ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ಈ ಸಂದರ್ಶನದಲ್ಲಿ ‘ನಿಮ್ಮ ಸಿನಿಮಾದ ‘ಹೀರೋ’ ಯಾರು?’ ಎಂಬ ಸಂದರ್ಶಕರ ಪ್ರಶ್ನೆಗೆ ಖಡಕ್ ಆದ ಉತ್ತರವನ್ನು ನೀಡುತ್ತಾ, ‘ನನ್ನ ಸಿನಿಮಾಕ್ಕೆ ನಾನೇ ಹೀರೋ’ ಎಂದು ಹೇಳಿದ್ದಾರೆ ನಟಿ ಸಮಂತಾ. ಮಾತ್ರವಲ್ಲದೆ ಸಿನಿಮಾದ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಮಂತಾ, ಸಾಕಷ್ಟು ವಿಷಯಗಳನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ವಿವಿಧ ಅವತಾರಗಳಲ್ಲಿ ಸಮಂತಾ: ‘ಮಾ ಇಂಟಿ ಬಂಗಾರಂ’ ವಿಡಿಯೋ

ಸಮಂತಾರನ್ನು ತೆಲುಗಿನ ಖ್ಯಾತ ಹಾಸ್ಯನಟ ಮತ್ತು ಸಮಂತಾರ ಆತ್ಮೀಯ ಗೆಳೆಯರೂ ಆಗಿರುವ ವೆನ್ನೆಲ ಕಿಶೋರ್ ಸಂದರ್ಶನ ಮಾಡಿದ್ದು, ಸಂದರ್ಶನದ ವೇಳೆ ನಿಮ್ಮೆ ಸಿನಿಮಾಕ್ಕೆ ಹೀರೋ ಯಾರು? ಎಂದು ಕೇಳಿದ್ದಾರೆ ಅದಕ್ಕೆ ಸಮಂತಾ, ವೆನ್ನೆಲ ಕಿಶೋರ್​ಗೆ ‘ಹೀರೋ’ ಪದದ ಅರ್ಥ ಏನೆಂದು ಹೇಳಿದ್ದಾರೆ. ಚಾಟ್ ಜಿಪಿಟಿಯಿಂದ ಉತ್ತರ ಹೇಳಿಸಿದ ಸಮಂತಾ, ‘ಹೀರೋ’ ಎಂದರೆ ಪುರುಷನೇ ಆಗಬೇಕಿಲ್ಲ, ಅದು ಯಾವ ಲಿಂಗಕ್ಕೂ ಸೇರದ ಪದ’, ನನ್ನ ಸಿನಿಮಾನಲ್ಲಿ ನಾನೇ ‘ಹೀರೋ’ ಎಂದಿದ್ದಾರೆ ನಟಿ. ಹಾಗಿದ್ದರೆ ‘ಹೀರೋಯಿನ್’ ಯಾರು? ಎಂಬ ಪ್ರಶ್ನೆಗೂ ಸಹ ಸಮಂತಾ ಅದೇ ರೀತಿಯ ಉತ್ತರವನ್ನು ನೀಡಿದ್ದಾರೆ. ತಮ್ಮ ಸಿನಿಮಾನಲ್ಲಿ ಹೀರೋ, ಹೀರೋಯಿನ್ ಎರಡೂ ನಾನೇ ಎಂದಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾ, ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದು, ಸಮಂತಾ ಕುಟುಂಬವೊಂದರ ಸೊಸೆಯಾಗಿ ನಟಿಸಿದ್ದಾರೆ. ಆದರೆ ಸಮಂತಾ, ಸೊಸೆಯಾಗಿದ್ದುಕೊಂಡೆ ಸಖತ್ ಆಕ್ಷನ್ ದೃಶ್ಯಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಸಖತ್ ಫೈಟ್ ದೃಶ್ಯಗಳಲ್ಲಿ ಸಹ ಭಾಗಿ ಆಗಿದ್ದಾರೆ. ಆದರೆ ಆ ಕುಟುಂಬದವರು ಸಮಂತಾರನ್ನು ಮುಗ್ಧ ಸೊಸೆ ಎಂದೇ ನೋಡುತ್ತಿದ್ದಾರೆ. ಸಿನಿಮಾವನ್ನು ಸಮಂತಾರ ಪತಿ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ನಂದಿನಿ ರೆಡ್ಡಿ. ಸಿನಿಮಾದ ಚಿತ್ರೀಕರಣ ಶಿವಮೊಗ್ಗನ ತೀರ್ಥಹಳ್ಳಿಯಲ್ಲಿ ಮಾಡಲಾಗಿದೆ. ಸಿನಿಮಾ ಮೇ 15 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *