ಮೃತದೇಹ ಪತ್ತೆಯಾಗಿದ್ದ ಕೊಠಡಿ ಹಾಗೂ ಒಳಚಿತ್ರದಲ್ಲಿ ಪೂಜಾ ದತ್ತಾImage Credit source: tv9
ಬೆಂಗಳೂರು, ಏಪ್ರಿಲ್ 28: ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ ಯುವತಿ ಪೂಜಾ ದತ್ತಾ ಅವರ ನಗ್ನ ಮೃತದೇಹ ಪತ್ತೆಯಾದ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಯುವತಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ ಮನೆಯಲ್ಲೇ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆಯೋ (Suspected Murder Case) ಅಥವಾ ಅನುಮಾನಾಸ್ಪದ ಸಾವೋ (Suspicious Death) ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ (Police Investigation) ನಡೆಸುತ್ತಿದ್ದಾರೆ.
ಮನೆ ಮಾಲೀಕರು ನೀಡಿದ ಮಾಹಿತಿ ಇಲ್ಲಿದೆ
ಮೃತ ಪೂಜಾ ವಾಸವಿದ್ದ ಮನೆಯ ಮಾಲೀಕ ಜಾನಕಮ್ಮ ಅವರು ಈ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ‘ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಆಕೆ ಅವಿವಾಹಿತೆಯಾಗಿದ್ದು, ಹೆಚ್ಚಾಗಿ ಹಿಂದಿಯಲ್ಲೇ ಸಂವಹನ ನಡೆಸುತ್ತಿದ್ದಳು. ಆಕೆಯನ್ನು ಭೇಟಿ ಮಾಡಲು ಒಬ್ಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅವನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ದುರ್ನಾತ ಬಂದಾಗ ಬೆಳಕಿಗೆ ಬಂದ ಕೃತ್ಯ
ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಕೆಳಗಿಳಿದು ಬಂದಿದ್ದೇ ಪೂಜಾಳನ್ನು ನೋಡಿದ ಕೊನೆಯ ಕ್ಷಣ ಎಂದು ಜಾನಕಮ್ಮ ತಿಳಿಸಿದ್ದಾರೆ. ಏಪ್ರಿಲ್ 27 ರ ಸಂಜೆ ಮನೆಯಿಂದ ತೀವ್ರ ದುರ್ನಾತ ಬರುತ್ತಿದ್ದ ಕಾರಣ, ಪಕ್ಕದ ಮನೆಯ ಯುವಕರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಿದಾಗ, ಪೂಜಾ ಬೆತ್ತಲಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಫ್ಯಾನ್ ಚಾಲನೆಯಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಪೂಜಾ ದತ್ತ ಅನುಮಾನಾಸ್ಪದ ಸಾವು; ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!
ಸ್ಥಳಕ್ಕೆ ಧಾವಿಸಿದ ಆಡುಗೋಡಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆಗಾಗ ಮನೆಗೆ ಬರುತ್ತಿದ್ದ ಆ ನಿಗೂಢ ಯುವಕ ಯಾರು? ಆತನಿಗೂ ಈ ಸಾವಿಗೂ ಸಂಬಂಧವಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಪೂಜಾಳ ಸಾವಿನ ಹಿಂದಿನ ಅಸಲಿ ಸತ್ಯ ಹೊರಬೀಳಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ