ರಾಯಚೂರು, ಏಪ್ರಿಲ್ 28: ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೋರ್ವ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ರಾಯಚೂರಿನ (Raichur) ಯಾಪಲದಿನ್ನಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಹುಸೇನಪ್ಪ ಮಡಿವಾಳ (49) ಮೃತ ದುರ್ದೈವಿಯಾಗಿದ್ದು, ಕುಸಿದು ಬಿದ್ದ ಈತನನ್ನು ಕೂಡಲೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಹುಸೇನಪ್ಪ ಉಸಿರು ಚೆಲ್ಲಿದ್ದಾರೆ. ಘಟನೆ ಬೆನ್ನಲ್ಲೇ ಸುಡು ಬಿಸಿಲಿನಲ್ಲಿ ಕಾರ್ಮಿಕರನ್ನು ದುಡಿಸುತ್ತಿದ್ದ ಪಿಡಿಒ ವಿರುದ್ಧ ಆಕ್ರೋಶ ಕೇಳಿಬಂದಿದೆ.
ಹೀಟ್ ಸ್ಟ್ರೋಕ್ಗೆ ಬಲಿ?
ಇನ್ನು ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಡುವೆಯೂ ಕಾರ್ಮಿಕರು ಯಾಪಲದಿನ್ನಿ ಗ್ರಾಮದ ಹೊರ ಭಾಗದಲ್ಲಿನ ಒಣಗಿ ಹೋಗಿರುವ ಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಹೀಟ್ ಸ್ಟ್ರೋಕ್ಗೆ ಹುಸೇನಪ್ಪ ಮಡಿವಾಳ ಬಲಿಯಾಗಿದ್ದಾರೆ ಎಂದು ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಹೇಳ್ತಿದ್ದಾರೆ. ಆದರೆ ಹೀಟ್ ಸ್ಟ್ರೋಕ್ಗೆ ಬಲಿಯಾಗಿರೋದನ್ನ ಖಚಿತಪಡಿಸಲು ಪರೀಕ್ಷೆಗಳಿಲ್ಲ. ಮರಣೋತ್ತರ ಪರೀಕ್ಷೆಯಲ್ಲೂ ಆ ಅಂಶವನ್ನ ಪತ್ತೆಮಾಡಲು ಆಗಲ್ಲ ಎಂದು ರಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ್ ಪಾಟೀಲ್ ತಿಳಿಸಿದ್ದಾರೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವ ಕಾರಣ ಬಿಪಿ ಕಡಿಮೆಯಾಗಿ ಮೃತಪಡುವ ಸಾಧ್ಯತೆ ಇರುತ್ತೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್
ಪರಿಹಾರಕ್ಕೆ ಆಗ್ರಹ
ಇನ್ನು ಉದ್ಯೋಗ ಖಾತ್ರಿ ಕೆಲಸ ಮಾಡಿಸುವ ವೇಳೆ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪ ಮೃತನ ಕಡೆಯವರಿಂದ ಕೇಳಿಬಂದಿದೆ. ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ನೆರಳು, ಕುಡಿಯುವ ನೀರು, ORS ವ್ಯವಸ್ಥೆ ಸೇರಿದಂತೆ ಯಾವುದೂ ಇರಲಿಲ್ಲ. ಹೀಗಾಗಿ ಘಟನೆಗೆ ಯಾಪಲದಿನ್ನಿ ಗ್ರಾಮ ಪಂಚಾಯತಿ ಮತ್ತು ಪಿಡಿಒ ನಿರ್ಲಕ್ಷ್ಯ ಕಾರಣವಾಗಿದ್ದು, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಓರ್ವ ಕಾರ್ಮಿಕನ ಸಾವಾಗಿದ್ದರೂ ಈವರೆಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾರೊಬ್ಬರೂ ಕೂಡ ಮೃತನ ಕುಟುಂಬಸ್ಥರನ್ನು ಸಂಪರ್ಕಿಸಿಲ್ಲ ಎಂದು ಕೂಡ ದೂರಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.