ರಣಾಂಗಣವಾದ ಕುವೆಂಪು ವಿಶ್ವವಿದ್ಯಾಲಯದ ಆವರಣ
ಶಿವಮೊಗ್ಗ, ಏಪ್ರಿಲ್ 29: ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕುಲಪತಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆವರಣವು ರಣರಂಗವಾಗಿ ಮಾರ್ಪಟ್ಟಿದ್ದು, NSUI ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ವೇಳೆ ಕುಲಪತಿಗಳ ಕಚೇರಿಯಲ್ಲಿದ್ದ ಕುರ್ಚಿ ಮತ್ತು ಪಾಟ್ಗಳನ್ನು ದ್ವಂಸ ಮಾಡಲಾಗಿದೆ. ಅಲ್ಲದೆ, ಕುಲಪತಿ ಕಚೇರಿಯ ನಾಮಫಲಕಕ್ಕೆ ಮಸಿ ಬಳಿದು ತಮ್ಮ ಅಸಮಾಧಾನ ಹೊರಹಾಕಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆಕ್ರೋಶಕ್ಕೆ ಕಾರಣ ಏನು?
ಕಳೆದ ಕೆಲವು ತಿಂಗಳಿಂದ ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ಸರಿಯಾಗಿ ತಲುಪದಿರುವುದು, ಹಾಸ್ಟೆಲ್ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಳಪೆ ನಿರ್ವಹಣೆ, ಕಳೆದ ಐದು ತಿಂಗಳಿನಿಂದ 1ನೇ, 3ನೇ ಮತ್ತು 5ನೇ ಸೆಮಿಸ್ಟರ್ಗಳ ಪರೀಕ್ಷಾ ಫಲಿತಾಂಶಗಳು ವಿಳಂಬವಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮುಖ್ಯ ಕಾರಣಗಳಾಗಿವೆ. ಈ ಬಗ್ಗೆ ಹಲವಾರು ಬಾರಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕೆಲವು ತಾತ್ಕಾಲಿಕ ಸಿಬ್ಬಂದಿಗಳ ನೇಮಕಾತಿ ಮತ್ತು ನಿರ್ವಹಣೆಯಲ್ಲಿಯೂ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ.ಕುಲಪತಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಮತ್ತು ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಇದನ್ನೂ ಓದಿ: ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಕೋಕ್; ಇವಿಷ್ಟೇ ಸಾಂಗ್ಗಳಿಗೆ ಮಾತ್ರ ಇನ್ಮುಂದೆ ಅವಕಾಶ
ಕುಲಪತಿಗಳು ಹೇಳೋದೇನು?
ಇನ್ನು ಘಟನೆ ಬಗ್ಗೆ ಪ್ರತಿಕ್ರಿಕೆ ನೀಡಿರುವ ಕುಲಪತಿ ಶರತ್ ಅನಂತಮೂರ್ತಿ, ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಎಂಬಿಎ ವಿದ್ಯಾರ್ಥಿಗಳಿಗೆ ಮಾರಾಟದ ಮಳಿಗೆ ಆಯೋಜನೆ ಮಾಡಲಾಗಿದ್ದು, ಅಲ್ಲಿದ್ದ ನನಗೆ ಕುಲಪತಿ ಕಚೇರಿಯಿಂದ ಕರೆ ಬಂತು. ಯಾರೋ ಬಂದು ಕಚೇರಿಯ ಪಾಟ್ಗಳನ್ನು ಒಡೆದು ಹಾಕುತ್ತಿದ್ದಾರೆ. ನುಗ್ಗಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದೇನೆ. ಆ ವೇಳೆ ನನ್ನ ವಿರುದ್ಧ ಘೋಷಣೆ ಕೂಗಿ ಘೇರಾವ್ ಹಾಕಿದ್ದಾರೆ. ಸ್ವಲ್ಪ ತಳ್ಳಾಟದ ಯತ್ನವೂ ನಡೆದಿದೆ. ಕುವೆಂಪು ಅವರ ಭಾವಚಿತ್ರದ ಎದುರೇ ಮಡಿಕೆಗಳನ್ನ ಒಡೆಯಲಾಗಿದ್ದು, ಒಂದು ಹಂತಕ್ಕೆ ಅವರಿಗೇ ಅವಮಾನ ಮಾಡುವ ಯತ್ನವನ್ನು ನಡೆಸಲಾಗಿದೆ. ಪ್ರತಿಭಟನೆ ನಡೆಸಿದವರು ಯಾರು ಅಂತಲೂ ನಮಗೆ ಗೊತ್ತಿಲ್ಲ. ಸಮಸ್ಯೆ ಏನು ಎಂದೂ ಸರಿಯಾಗಿ ಅವರು ಹೇಳಿಲ್ಲ. ಇದೇ ಪ್ರತಿಭಟನಾ ನಿರತರ ಪೈಕಿ ನಾಲ್ವರು ಈ ಹಿಂದೆಯೂ ಬಂದಿದ್ದರು. ಅವರ ಮನವಿಯನ್ನು ನಾನು ಸ್ವೀಕರಿಸಿದ್ದೆ. ಇಲ್ಲಿ ಬಂಧು ದಾಂಧಲೆ ನಡೆಸಿದವರು ವಿದ್ಯಾರ್ಥಿಗಳಾ ಎಂಬುದು ಗೊತ್ತಿಲ್ಲ. ಘಟನೆ ಹಿಂದೆ ಯಾರೋ ಬೇರೆಯವರು ಇದ್ದಂತೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.