ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾ (KD Movie) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಧ್ರುವ ಸರ್ಜಾ ಅಭಿಮಾನಿಗಳು ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಲು ಹೋದವರಿಗೆ ಒಂದು ಸರ್ಪ್ರೈಸ್ ಕೂಡ ಕಾದಿತ್ತು. ಈ ಸಿನಿಮಾಗೆ ಸೀಕ್ವೆಲ್ (KD 2) ಕೂಡ ಬರಲಿದೆ ಎಂಬುದನ್ನು ಕ್ಲೈಮ್ಯಾಕ್ಸ್ನಲ್ಲಿ ತಿಳಿಸಲಾಗಿದೆ. ಅದರಿಂದಾಗಿ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಆ ಬಗ್ಗೆ ಜೋಗಿ ಪ್ರೇಮ್ (Jogi Prem) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಕೆಡಿ 2’ ಸಿನಿಮಾದ ಶೂಟಿಂಗ್ ಆಗಿದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರೇಮ್ ಅವರು ಉತ್ತರ ನೀಡಿದ್ದಾರೆ. ‘ಮೊದಲು ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲಿ. ಆಮೇಲೆ ಹೇಳುತ್ತೇನೆ. ಸಾವು ಸುಮ್ಮನೆ ಉತ್ಪ್ರೇಕ್ಷೆಗೆ ಹೇಳಿದರೆ ಪ್ರೇಕ್ಷಕರ ಕುತೂಹಲ ಜಾಸ್ತಿ ಆಗುತ್ತದೆ. 100 ಪರ್ಸೆಂಟ್ ಈ ಸಿನಿಮಾಗೆ ಪಾರ್ಟ್ 2 ಬರುತ್ತದೆ. ಇದಕ್ಕೆಲ್ಲ ಕೆವಿಎನ್ ಪ್ರೊಡಕ್ಷನ್ಸ್ ಕಾರಣ’ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
‘ನಾವು ಈ ಸಿನಿಮಾಗಾಗಿ ತುಂಬ ಕಷ್ಟಪಟ್ಟಿದ್ದೇವೆ. ಯುಎಫ್ಓ ಸಮಸ್ಯೆಯಿಂದ ಬೆಳಗ್ಗೆ ಒಂದು ಶೋ ಸಮಸ್ಯೆ ಆಯಿತು. ಈಗ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ. ಎಲ್ಲರೂ ‘ಕೆಡಿ 2’ ಎನ್ನುತ್ತಿದ್ದಾರೆ ಧನ್ಯವಾದಗಳು. ಅದಕ್ಕೆ ಇನ್ನೊಂದು ವರ್ಷ ಸಮಯ ತೆಗೆದುಕೊಳ್ಳುತ್ತೇನೆ. ಸಿನಿಮಾ ಗೆದ್ದಿದ್ದಕ್ಕೆ ಖುಷಿ ಇದೆ. ಗೀತಕ್ಕ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡರು’ ಎಂದಿದ್ದಾರೆ ಪ್ರೇಮ್.
ಸೀಕ್ವೆಲ್ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರ ಪೂರ್ಣ ಪ್ರಮಾಣದಲ್ಲಿ ಇರುತ್ತಾ ಎಂಬ ಪ್ರಶ್ನೆ ಇದೆ. ಅದಕ್ಕೆ ಪ್ರೇಮ್ ಈಗಲೇ ಉತ್ತರ ನೀಡಿಲ್ಲ. ‘ಕಾದು ನೋಡಿ’ ಎಂದು ಅವರು ಹೇಳಿದ್ದಾರೆ. ‘ಜನರು ಪ್ರೇಮ್ ಈಸ್ ಬ್ಯಾಕ್ ಅಂತ ಹೇಳುತ್ತಿದ್ದಾರೆ. ನಾನು ಇಲ್ಲೇ ಇದ್ದೀನಿ. ನನ್ನ ಮಗ ಕೂಡ ಇದರಲ್ಲಿ ಆ್ಯಕ್ಟ್ ಮಾಡಿದ್ದಾನೆ. ಅವನ ಬಗ್ಗೆ ಮಾತಾಡೋದು ಬೇಡ. ಓದುತ್ತಿದ್ದಾನೆ, ಮೊದಲು ಓದಲಿ’ ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ
ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಹಾಗಾದ್ರೆ ಇನ್ಮುಂದೆ ಇಂಥ ಸಿನಿಮಾಗಳನ್ನೇ ಮಾಡುತ್ತೀರಾ ಎಂದು ಕೇಳಿದ್ದಕ್ಕೆ, ‘ಫುಲ್ ಟೈಮ್ ಮಚ್ಚು ಹಿಡಿಯಲು ನಾನು ರೆಡಿ. ಆದರೆ ಎಲ್ಲ ನಿರ್ದೇಶಕರೂ ಪ್ರೇಮ್ ಆಗೋಕೆ ಆಗಲ್ಲ’ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.