IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗಾಗಲೇ ಬಹುತೇಕ ತಂಡಗಳು 9 ಮ್ಯಾಚ್ಗಳನ್ನು ಆಡಿದೆ. ಇದಾಗ್ಯೂ ಯಾವುದೇ ತಂಡ ಪ್ಲೇಆಫ್ಗೇರಿಲ್ಲ. ಅತ್ತ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ.
ಸದ್ಯದ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆರ್ಸಿಬಿ, ಈ ಬಾರಿ ಕೂಡ ಪ್ಲೇಆಫ್ ಆಡುವುದು ಬಬುತೇಕ ಖಚಿತ. ಏಕೆಂದರೆ ಆರ್ಸಿಬಿ ಮುಂದೆ ಇನ್ನೂ 5 ಪಂದ್ಯಗಳಿವೆ. ಈ ಐದು ಮ್ಯಾಚ್ಗಳಲ್ಲಿ 4 ಅಂಕಗಳನ್ನು ಪಡೆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಪ್ಲೇಆಫ್ಗೇರಲಿದೆ.
ಏಕೆಂದರೆ ಆರ್ಸಿಬಿ ತಂಡವು ಈಗಾಗಲೇ 9 ಪಂದ್ಯಗಳಿಂದ 12 ಅಂಕಗಳನ್ನು ಪಡೆದುಕೊಂಡಿದ್ದು, ಅದರ ಜೊತೆಗೆ +1.420 ನೆಟ್ ರನ್ ರೇಟ್ ಹೊಂದಿದೆ. ಇದು ಇತರ ಎಲ್ಲಾ ತಂಡಗಳಿಗಿಂತ ಉತ್ತಮವಾಗಿದ್ದು, ಪ್ಲೇ-ಆಫ್ ರೇಸ್ನಲ್ಲಿ ಆರ್ಸಿಬಿಗೆ ದೊಡ್ಡ ರಕ್ಷಣಾ ಕವಚದಂತಿದೆ. ಅದರಂತೆ ಆರ್ಸಿಬಿ ತಂಡದ ಪ್ಲೇಆಫ್ ಸಮೀಕರಣ ಈ ಕೆಳಗಿನಂತಿದೆ…
ಕನಿಷ್ಠ ಗುರಿ: ಉಳಿದಿರುವ 5 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಆರ್ಸಿಬಿ 16 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸುವುದು ಖಚಿತವಾಗಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್… ಈ ತಂಡಗಳ ವಿರುದ್ಧ ಪಂದ್ಯಗಳಲ್ಲಿ ಆರ್ಸಿಬಿ 2 ಗೆಲುವು ದಾಖಲಿಸಿದರೆ ಸಾಕು, ಪ್ಲೇಆಫ್ಗೆ ಎಂಟ್ರಿ ಕೊಡಬಹುದು.
ಟಾಪ್-2 ಸ್ಥಾನದ ಗುರಿ: ಒಂದು ವೇಳೆ ಆರ್ಸಿಬಿ ತಂಡವು ಉಳಿದ 5 ಪಂದ್ಯಗಳಲ್ಲಿ 3 ಅಥವಾ ಹೆಚ್ಚಿನ ಪಂದ್ಯಗಳನ್ನು ಗೆದ್ದರೆ, ತಂಡವು ಅಂಕಪಟ್ಟಿಯಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇದರಿಂದ ಫೈನಲ್ಗೆ ಹೋಗಲು ತಂಡಕ್ಕೆ ಎರಡು ಅವಕಾಶಗಳು (Qualifiers) ಸಿಗಲಿವೆ. ಹೀಗಾಗಿ ಆರ್ಸಿಬಿ ತಂಡವು ಮುಂದಿನ ಐದು ಪಂದ್ಯಗಳಲ್ಲಿ ಕನಿಷ್ಠ 3 ಮ್ಯಾಚ್ಗಳನ್ನು ಗೆಲ್ಲಲು ಪ್ಲ್ಯಾನ್ ರೂಪಿಸಲಿದೆ.




