
ಸಾಯಿ ಪಲ್ಲವಿ ಹಾಗೂ ಆಮಿರ್ ಖಾನ್ ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೆಚ್ಚಿನ ಏಳ್ಗೆ ಕಾಣುತ್ತಿಲ್ಲ. ಬುಕ್ ಮೈ ಶೋನಲ್ಲಿ ಸಿನಿಮಾ ಉತ್ತಮ ರೇಟಿಂಗ್ ಪಡೆದುಕೊಂಡ ಹೊರತಾಗಿಯೂ ಚಿತ್ರಕ್ಕೆ ಕಡಿಮೆ ಕಲೆಕ್ಷನ್ ಆಗುತ್ತಿದೆ. ದೇಶಾದ್ಯಂತ ಚಿತ್ರಕ್ಕೆ ಸಾವಿರಾರು ಶೋಗಳನ್ನು ನೀಡಲಾಗಿತ್ತು. ಇದರ ಮಧ್ಯೆಯೂ ಸಿನಿಮಾ ಚೇತರಿಕೆ ಕಾಣುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.
‘ಏಕ್ ದಿನ್’ ಸಿನಿಮಾ ಮೇ 1ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡರು. ಸಿನಿಮಾಗೆ ಎಲ್ಲ ಕಡೆಗಳಲ್ಲೂ ಪಾಸಿಟಿವ್ ಟಾಕ್ ಇದೆ. ಆದರೆ, ಸಾಯಿ ಪಲ್ಲವಿ ಪರಿಚಯ ಬಾಲಿವುಡ್ನಲ್ಲಿ ಅನೇಕರಿಗೆ ಇಲ್ಲ ಎಂದರೂ ತಪ್ಪಾಗಲಾರದು. ಈ ಕಾರಣಕ್ಕೆ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತಿದೆ.
‘ಏಕ್ ದಿನ್’ ಚಿತ್ರದಲ್ಲಿ ಜುನೈದ್ ಖಾನ್ ನಟಿಸಿದ್ದಾರೆ. ಮಗನ ಸಿನಿಮಾ ಎಂಬ ಕಾರಣಕ್ಕೆ ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ಮೊದಲೆರಡು ದಿನ ತಲಾ 1.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಭಾನುವಾರ (ಮೇ 4) ಸುಮಾರು 2 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರಕ್ಕೆ 3.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಚಿತ್ರದ ಬಜೆಟ್ 15 ಕೋಟಿ ರೂಪಾಯಿ. ಈ ಸಿನಿಮಾ ಲಾಭ ಕಾಣಬೇಕು ಎಂದರೆ ಏನಿಲ್ಲ ಎಂದರೂ 30 ಕೋಟಿ ರೂಪಾಯಿ ಗಳಿಕೆ ಮಾಡಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಅದು ಅಸಾಧ್ಯ. ಇನ್ನು, ಒಟಿಟಿ, ಸ್ಯಾಟಲೈಟ್ ರೈಟ್ ಹಕ್ಕುಗಳ ಮಾರಾಟದಿಂದ ನಿರ್ಮಾಪಕರಿಗೆ ಸ್ವಲ್ಪ ಹಣ ಬರಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದರೆ ಮಾತ್ರ ಆಮಿರ್ ಖಾನ್ ಲಾಭ ಕಾಣುತ್ತಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್?
ಅಂದಹಾಗೆ, ಆಮಿರ್ ಖಾನ್ ಅವರಿಗೆ ಸಿನಿಮಾ ನಿರ್ಮಾಣದಿಂದ ದುಡ್ಡು ಮಾಡಬೇಕು ಎನ್ನುವ ಉದ್ದೇಶ ಇಲ್ಲ. ಅವರ ಉದ್ದೇಶ ಏನಿದ್ದರೂ ಒಳ್ಳೆಯ ಸಿನಿಮಾ ನೀಡಬೇಕು ಎಂಬುದು. ಹೀಗಾಗಿ, ಒಳ್ಳೆಯ ಕಥೆ ಸಿಕ್ಕರೆ ಅವರು ಸಿನಿಮಾ ಮಾಡುತ್ತಾರೆ. ಅವರು ಲಾಭ-ನಷ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.