IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಫಿಲ್ ಸಾಲ್ಟ್ (Phil Salt) ಇಂಗ್ಲೆಂಡ್ಗೆ ಮರಳಿದ್ದಾರೆ. ಹೀಗೆ ಇಂಗ್ಲೆಂಡ್ಗೆ ವಾಪಾಸ್ ಆಗಲು ಮುಖ್ಯ ಕಾರಣ ಇಸಿಬಿ ಸೂಚನೆ.
ಏಪ್ರಿಲ್ 18ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಸಾಲ್ಟ್ ಅವರ ಎಡಗೈ ಬೆರಳಿಗೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಇದು ಸಣ್ಣ ಗಾಯ ಎಂದು ಭಾವಿಸಲಾಗಿದ್ದರೂ, ಕಳೆದ ಮೂರು ಪಂದ್ಯಗಳಿಂದ ಅವರು ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ.
ಇತ್ತ ಫಿಲ್ ಸಾಲ್ಟ್ ಗಾಯಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ತವರಿಗೆ ಮರಳುವಂತೆ ಸೂಚಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್ನಲ್ಲೇ ವೈದ್ಯಕೀಯ ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ಆದೇಶಿಸಿದ್ದಾರೆ.
ಹೀಗಾಗಿ ಫಿಲ್ ಸಾಲ್ಟ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದು ಇಂಗ್ಲೆಂಡ್ಗೆ ಪ್ರಯಾಣಿಸಿದ್ದಾರೆ. ಅದರಂತೆ ಇನ್ನು ಕೆಲ ದಿನಗಳ ಕಾಲ ಸಾಲ್ಟ್ ಇಂಗ್ಲೆಂಡ್ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಇದಾದ ಬಳಿಕ ವೈದ್ಯಕೀಯ ವರದಿ ಆಧರಿಸಿ ಮಾತ್ರ ಅವರಿಗೆ ಐಪಿಎಲ್ನಲ್ಲಿ ಆಡಲು ಅವಕಾಶ ಸಿಗಲಿದೆ.
ಅಂದರೆ ಫಿಲ್ ಸಾಲ್ಟ್ ಸಂಪೂರ್ಣ ಗುಣಮುಖರಾಗುವವರೆಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅವರಿಗೆ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ನೀಡುವುದಿಲ್ಲ. ಹೀಗಾಗಿ ಆರ್ಸಿಬಿ ತಂಡದ ಮುಂಬರುವ ಪಂದ್ಯಗಳಲ್ಲಿ ಸಾಲ್ಟ್ ಕಾಣಿಸಿಕೊಳ್ಳಲಿದ್ದಾರಾ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ.
ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಸಾಲ್ಟ್ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಆಡಿದ 6 ಪಂದ್ಯಗಳಲ್ಲಿ 168.33 ರ ಸ್ಟ್ರೈಕ್ ರೇಟ್ನಲ್ಲಿ 202 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಜೊತೆಗೆ ಆರ್ಸಿಬಿ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದರು. ಇದೀಗ ಅವರ ಅನುಪಸ್ಥಿತಿಯು ಆರ್ಸಿಬಿ ತಂಡದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಲಿದೆ.





