IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ (LSG) ಇದೀಗ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಎಲ್ಎಸ್ಜಿ ಪಡೆ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ.
ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇನ್ನೂ 5 ಪಪಂದ್ಯಗಳು ಬಾಕಿ ಇದೆ. ಈ ಐದು ಪಂದ್ಯಗಳು ಎಲ್ಎಸ್ಜಿ ಪಾಲಿಗೆ ನಿರ್ಣಾಯಕ. ಅಂದರೆ ಈ ಐದು ಮ್ಯಾಚ್ಗಳಲ್ಲಿ ಜಯ ಸಾಧಿಸುವುದು ಅನಿವಾರ್ಯ. ಆದರೆ ಈ ಗೆಲುವುಗಳು ಮಾತ್ರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ ಸ್ಥಾನ ನಿರ್ಧರಿಸುವುದಿಲ್ಲ. ಬದಲಾಗಿ ಉಳಿದ ತಂಡಗಳ ಫಲಿತಾಂಶಗಳು ಕೂಡ ಇಲ್ಲಿ ಗಣನೆಗೆ ಬರಲಿದೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ಹೇಗೆ ಪ್ಲೇಆಫ್ಗೇರಬಹುದು ಎಂದು ನೋಡುವುದಾದರೆ…
ಎಲ್ಲಾ ಪಂದ್ಯಗಳಲ್ಲೂ ಗೆಲುವು: ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ 5 ಪಂದ್ಯಗಳಲ್ಲೂ ಗೆಲುವು ದಾಖಲಿಸಬೇಕು. ಈ ಐದು ಪಂದ್ಯಗಳ ಗೆಲುವಿನೊಂದಿಗೆ ಎಲ್ಎಸ್ಜಿ ತಂಡದ ಒಟ್ಟು ಅಂಕ 14ಕ್ಕೆ ಏರುತ್ತದೆ. ಅತ್ತ ಲೀಗ್ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 14 ಅಂಕಗಳನ್ನು ಪಡೆದಿದ್ದರೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪ್ಲೇಆಫ್ಗೇರಲು ಅವಕಾಶ ದೊರೆಯಲಿದೆ.
ನೆಟ್ ರನ್ ರೇಟ್ ಲೆಕ್ಕಾಚಾರ: ಲಕ್ನೋ ಸೂಪರ್ ಜೈಂಟ್ಸ್ ತಂಡದ ರನ್ ರೇಟ್ ಸದ್ಯ ಲೀಗ್ನಲ್ಲಿಯೇ ಅತ್ಯಂತ ಕಳಪೆಯಾಗಿದೆ (-1.076). ಹೀಗಾಗಿ, ಮುಂದಿನ ಪಂದ್ಯಗಳನ್ನು ಕೇವಲ ಗೆದ್ದರೆ ಸಾಲದು, ದೊಡ್ಡ ಅಂತರದಿಂದ ಗೆಲ್ಲುವ ಮೂಲಕ ರನ್ ರೇಟ್ ಅನ್ನು ಧನಾತ್ಮಕವಾಗಿಸಿಕೊಳ್ಳಬೇಕಿದೆ. ಅದರಂತೆ ಅಂಕ ಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 14 ಅಂಕಗಳನ್ನು ಹೊಂದಿದ್ದರೆ, ಉತ್ತಮ ನೆಟ್ ರನ್ ರೇಟ್ + 14 ಅಂಕಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ಗೇರಬಹುದು.
ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬನೆ: ಮೇಲೆ ಹೇಳಿದಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 14 ಅಂಕಗಳನ್ನು ಪಡೆದರೆ ನೇರವಾಗಿ ಪ್ಲೇ-ಆಫ್ ಪ್ರವೇಶಿಸುವುದಿಲ್ಲ. ಬದಲಾಗಿ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿರುವ ತಂಡಗಳಲ್ಲಿ ಕನಿಷ್ಠ ಒಂದು ತಂಡ 14 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯಬಾರದು ಎಂಬುದನ್ನು ಎದುರು ನೋಡಬೇಕು. ಪ್ರಸ್ತುತ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿರುವ ಪಂಜಾಬ್ ಕಿಂಗ್ಸ್, ಆರ್ಸಿಬಿ, ಎಸ್ಆರ್ಹೆಚ್ ಅಥವಾ ಆರ್ಆರ್ ತಂಡಗಳಲ್ಲಿ ಒಂದು ತಂಡವು ಮುಂದಿನ ಪಂದ್ಯಗಳಲ್ಲಿ ಸತತವಾಗಿ ಸೋಲುವುದು ಕೂಡ ಲಕ್ನೋ ಸೂಪರ್ ಜೈಂಟ್ಸ್ ಪಾಲಿಗೆ ಅನಿವಾರ್ಯ. ಹೀಗಾದಲ್ಲಿ ಮಾತ್ರ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ಗೇರಬಹುದು.




