ದೇಶದ ಹಲವೆಡೆ ಉಷ್ಣತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಹೀಟ್ ಸ್ಟ್ರೋಕ್ (Heat Stroke) ಬಗ್ಗೆ ನೀವು ಕೇಳಿರಬಹುದು ಇದು ದೇಹದ ಉಷ್ಣಾಂಶವು ಅತಿಯಾಗಿ ಏರಿಕೆಯಾಗುವ ಸ್ಥಿತಿಯಾಗಿದ್ದು ದೀರ್ಘಕಾಲ ಬಿಸಿಲಿನಲ್ಲಿ ಇರುವುದು ಈ ಸಮಸ್ಯೆಗೆ ಕಾರಣವಾಗುತ್ತದೆ. ಜೊತೆಗೆ ಈ ರೀತಿಯಾದಾಗ ದೇಹವು ತಾನೇ ತಣ್ಣಗಾಗಲು ಸಾಧ್ಯವಾಗುವುದಿಲ್ಲ. ತೀವ್ರ ಜ್ವರ, ತಲೆಸುತ್ತು, ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಈ ರೀತಿ ಬೇಸಿಗೆಯಲ್ಲಿ ಉಂಟಾಗುವ ಹೀಟ್ ಸ್ಟ್ರೋಕ್ ಗರ್ಭಿಣಿಯರಿಗೆ ಮಾತ್ರವಲ್ಲದೆ ಗರ್ಭದಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಉಂಟಾದರೆ ಶಿಶುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆಯೇ, ಯಾವ ರೀತಿ ಮೆನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಗುವಿನ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಉಂಟಾದರೆ ಗರ್ಭದಲ್ಲಿರುವ ಶಿಶುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಹದ ಹೆಚ್ಚಿನ ತಾಪಮಾನವು ಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳಲ್ಲಿ ನ್ಯೂರೋಲಾಜಿಕಲ್ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಆದರೆ ಇದು ಎಲ್ಲ ಪ್ರಕರಣಗಳಲ್ಲೂ ಕಂಡುಬರುವುದಿಲ್ಲ. ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವ ಅಥವಾ ಹೊರಗಡೆ ಹೆಚ್ಚು ಸಮಯ ಕಳೆಯುವ ಗರ್ಭಿಣಿಯರಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ. ಜೊತೆಗೆ ಈಗಾಗಲೇ ಆರೋಗ್ಯ ಸಮಸ್ಯೆ ಇರುವ ಮಹಿಳೆಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಡಿಹೈಡ್ರೇಶನ್ನಿಂದ ಆರಂಭವಾಗಿ ನಂತರ ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಳಿಗ್ಗೆ ಮಾತ್ರವಲ್ಲ ರಾತ್ರಿ ಸಮಯದಲ್ಲೂ ಹೀಟ್ ಸ್ಟ್ರೋಕ್ ಅಪಾಯ ತಪ್ಪಿದ್ದಲ್ಲ: ತಜ್ಞರಿಂದ ಎಚ್ಚರಿಕೆ
ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?
ಗರ್ಭಿಣಿಯರು ದಿನಕ್ಕೆ ಕನಿಷ್ಠ 7– 8 ಗ್ಲಾಸ್ ನೀರು ಕುಡಿಯಬೇಕು. ಜೊತೆಗೆ ಎಳನೀರು, ಮಜ್ಜಿಗೆ ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಓಆರ್ಎಸ್ ಸೇವಿಸಬಹುದು. ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ, ಹಗುರವಾದ ಬಟ್ಟೆಗಳನ್ನು ಧರಿಸುವುದು ಉತ್ತಮ. ದೇಹವನ್ನು ತಣ್ಣಗಿರಿಸಲು ಸಾಕಷ್ಟು ವಿಶ್ರಾಂತಿ ಪಡೆಯುವುದು ಅಗತ್ಯ. ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಅಪಾಯವನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಜಾಗೃತಿ, ಹೈಡ್ರೇಶನ್ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ