ಬೆಂಗಳೂರು, ಮೇ 06: ಆಟೋ ಎಲ್ಪಿಜಿ ಬಿಕ್ಕಟ್ಟಿನ ಬೆನ್ನಲ್ಲೇ ಬೆಂಗಳೂರಲ್ಲೀಗ (Bengaluru) ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಆ ಮೂಲಕ ವಾಹನ ಸವಾರರು ಮತ್ತೊಂದು ಸಂಕಷ್ಟಕ್ಕೆ ಸಿಲುಕುವ ಎಲ್ಲ ಲಕ್ಷಣಗಳು ಗೋಚರಿಸಿದೆ. ನಗರದಲ್ಲಿ ತೈಲ ಪೂರೈಕೆ ಮಾಡುವ ಪ್ರಮುಖ ಕಂಪನಿಗಳಾದ ಎಚ್ಪಿ ಮತ್ತು ಭಾರತ್ ಪೆಟ್ರೋಲಿಯಂ ಬಂಕ್ಗಳಲ್ಲಿ ಕಳೆದ ಎರಡು ದಿನಗಳಿಂದ ಇಂಧನ ದಾಸ್ತಾನು ಖಾಲಿಯಾಗುತ್ತಿದೆ. ತೈಲ ಮಾರಾಟಗಾರರು ಇಂಧನಕ್ಕಾಗಿ ಮುಂಗಡವಾಗಿ ಹಣ ಪಾವತಿಸಿದ್ದರೂ, ಡಿಪೋಗಳಿಂದ ಬಂಕ್ಗಳಿಗೆ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲವಂತೆ. ಇಂಡಿಯನ್ ಆಯಿಲ್ ಬಂಕ್ಗಳಲ್ಲಿ ಸದ್ಯಕ್ಕೆ ಪೂರೈಕೆ ಸುಗಮವಾಗಿದ್ದರೂ, ಎಚ್ಪಿ ಮತ್ತು ಭಾರತ್ ಬಂಕ್ಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿರೋದು ಆತಂಕ ಹೆಚ್ಚಿಸಿದೆ.
ಜನ್ಮ ದಿನಕ್ಕೆ ಡಿಕೆಶಿಗೆ ಸಿಗುತ್ತಾ ಶುಭ ಸುದ್ದಿ?
ಪಂಚರಾಜ್ಯಗಳ ಚುನಾವಣೆ ಫಲಿತಾಂಸ ಹೊರಬಿದ್ದ ಬೆನ್ನಲ್ಲೇ ಕರ್ನಾಟಕದಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಧಿಕಾರ ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದಂದು ಹೈಕಮಾಂಡ್ನಿಂದ ಶುಭ ಸುದ್ದಿ ಸಿಗಬಹುದೆಂಬ ನಿರೀಕ್ಷೆ ಬೆಂಬಲಿಗರಲ್ಲಿ ಹೆಚ್ಚಿದೆ. ಈ ಕುರಿತು ಮಾತನಾಡಿರುವ ಮಾಜಿ ಸಂಸದ ಡಿ.ಕೆ. ಸುರೇಶ್ , ತಾವು ಕೂಡ ಈ ಶುಭ ಸುದ್ದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ತಾಳ್ಮೆ ಮುಖ್ಯ ಎಂದ ಅವರು, ಎಲ್ಲದಕ್ಕೂ ಒಂದು ಕಾಲ ಬರುತ್ತದೆ ಎಂದು ಹೇಳಿರೋದು ಕುತೂಹಲ ಮೂಡಿಸಿದೆ. ಸರ್ಕಾರ ಮತ್ತು ಪಕ್ಷದ ಅಧ್ಯಕ್ಷರು ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ಹೊಂದಿರುತ್ತಾರೆ. ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿರುವ ಸಂದರ್ಭದಲ್ಲಿ, ಅಧಿಕಾರ ಹಂಚಿಕೆ ಕುರಿತ ನಿರ್ಧಾರಗಳು ಮುಖ್ಯಮಂತ್ರಿಗಳು, ಪಕ್ಷ ಮತ್ತು ಹೈಕಮಾಂಡ್ನ ನಡುವೆ ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಚನಾನಂದ ಶ್ರೀಗೆ ಜಾಮೀನು ಮಂಜೂರು; ಕಾಂಗ್ರೆಸ್ ಕೇರಳದಲ್ಲಿ ಗದ್ದುಗೆ, ತಮಿಳುನಾಡಿನಲ್ಲಿ ವಿಜಯ್ ಜೊತೆ ಮೈತ್ರಿ!
ಕಂಡ ಕಂಡಲ್ಲಿ ಮೂತ್ರ ಮಾಡುವ ಮುನ್ನ ಜೋಕೆ!
ಶೌಚಾಲಯಗಳಿಗೆ ತೆರಳುವ ಬದಲು ಪಟ್ಟಣದಲ್ಲಿನ ಖಾಲಿ ಜಾಗ, ಕಾಂಪೌಂಡ್ಗಳ ಸಮೀಪ ಮೂತ್ರ ಮಾಡುವವರಿಗೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ದಂಡಾಸ್ತ್ರಕ್ಕೂ ಜನ ಬಗ್ಗದ ಕಾರಣ, ಈ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಪಾಲಿಕೆ ಮಾಸ್ಟರ್ ಪ್ಲಾನ್ ಮಾಡಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಕಾಂಪೌಂಡ್ ಗೋಡೆಗೆ ಸ್ಟೇನ್ ಲೆಸ್ ಸ್ಟೀಲ್ ಶೀಟ್ಗಳನ್ನು ಅಳವಡಿಸಲಾಗಿದ್ದು, ಇವು ಕನ್ನಡಿಯಂತೆ ಎದುರಿದ್ದವರನ್ನು ಪ್ರತಿಬಿಂಬಿಸಲಿವೆ. ಹೀಗಾಗಿ ಕಾಂಪೌಂಡ್ ಎಂದು ಅಲ್ಲಿ ಮೂತ್ರಮಾಡಲು ಹೋದರೆ ಮಾನ ಕಳೆದುಕೊಳ್ಳಬೇಕಾಗಬಹುದು ಜೋಕೆ!. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡುವವರಿಗೆ ಮುಜುಗರ ಉಂಟು ಮಅಡುವ ಮೂಲಕ ಈ ಚಾಳಿಗೆ ಬ್ರೇಕ್ ಹಾಕಲು ಮೈಸೂರು ಪಾಲಿಕೆ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗ ಯಶಸ್ಸು ಕಾಣುತ್ತೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:23 pm, Wed, 6 May 26