ಮದುವೆಯ ನಂತರ ನವ ಜೋಡಿಗಳು (newlyweds) ಹೋಗುವ ಪ್ರವಾಸಕ್ಕೆ ಹನಿಮೂನ್ ಎಂದು ಕರೆಯುತ್ತಾರೆ. ಮದುವೆಯ ಬಳಿಕ ಬಹುತೇಕ ಹೆಚ್ಚಿನ ಜೋಡಿಗಳು ಮಧುಚಂದ್ರಕ್ಕೆ ಹೋಗುತ್ತಾರೆ. ಕೆಲವರು ವಿದೇಶಗಳಿಗೆ ಟ್ರಿಪ್ ಹೋದ್ರೆ ಇನ್ನೂ ಕೆಲವರು ತಮ್ಮ ದೇಶದಲ್ಲೇ ಇರುವ ರೊಮ್ಯಾಂಟಿಕ್ ತಾಣಗಳಿಗೆ ಹಾನಿಮೂನ್ ಪ್ಲಾನ್ ಮಾಡ್ತಾರೆ. ಹನಿಮೂನ್ ನವ ದಂಪತಿಗಳಿಗೆ ತುಂಬಾನೇ ವಿಶೇಷವಾದದ್ದು, ಅದಕ್ಕಾಗಿಯೇ ಪತಿ ಪತ್ನಿಯರು ಸುಂದರವಾದ ಕ್ಷಣಗಳನ್ನು ಕಳೆಯಲು ರೊಮ್ಯಾಂಟಿಕ್ ತಾಣಗಳಿಗೆ ಪ್ರವಾಸ ಹೋಗುತ್ತಾರೆ. ಅಷ್ಟಕ್ಕೂ ಮದುವೆಯಾದ ಬಳಿಕ ಹನಿಮೂನ್ಗೆ ಹೋಗೋದು ಏಕೆ, ಇದರ ಹಿಂದಿನ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಿ.
ನವ ದಂಪತಿಗಳಿಗೆ ಹನಿಮೂನ್ ಏಕೆ ವಿಶೇಷ?
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾಗಿದೆ. ಆದ್ದರಿಂದ, ಕೆಲವು ದಂಪತಿಗಳು ತಮ್ಮ ಮದುವೆಯ ಆರಂಭಿಕ ದಿನಗಳನ್ನು ಇನ್ನಷ್ಟು ವಿಶೇಷವಾಗಿಸಲು ಹನಿಮೂನ್ಗೆ ಹೋಗುತ್ತಾರೆ. ಮದುವೆಯ ನಂತರ ದಂಪತಿಗಳು ನಿಜವಾಗಿಯೂ ಒಟ್ಟಿಗೆ ಸಮಯವನ್ನು ಆನಂದಿಸಬಹುದಾದ ಸಮಯವೆಂದರೆ ಹನಿಮೂನ್. ಈ ಹನಿಮೂನ್ ಸಂಸ್ಕೃತಿ ಹುಟ್ಟಿದ್ದು ಯುರೋಪಿನಲ್ಲಿ, ಆದರೆ ಇಂದು ಪ್ರಪಂಚದಾದ್ಯಂತ ಇದು ಆಚರಣೆಯಲ್ಲಿದೆ. ಹನಿಮೂನ್ ಕೇವಲ ಪ್ರವಾಸವಲ್ಲ, ಇದು ದಂಪತಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಮತ್ತು ಪರಸ್ಪರ ಉತ್ತಮ ತಿಳುವಳಿಕೆಯನ್ನು ಪಡೆಯಲು ಒಂದು ಅವಕಾಶವಾಗಿದೆ. ಅಲ್ಲದೆ ಮಧುಚಂದ್ರವು ನವದಂಪತಿಗಳಿಗೆ ತುಂಬಾನೇ ವಿಶೇಷವಾದದ್ದು, ಇದು ಸುಂದರ ಸಂಬಂಧದ ಆರಂಭವನ್ನು ಸೂಚಿಸುತ್ತದೆ
ಹಿಂದೆಲ್ಲಾ ಫೋನ್ ಇರದ ಕಾಲದಲ್ಲಿ ಹೆಚ್ಚಿನ ವಧು-ವರರು ತಮ್ಮ ಮದುವೆಯ ದಿನದಂದೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದರು. ಹಾಗಾಗಿ ದಂಪತಿಗಳಿಬ್ಬರಿಗೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಹನಿಮೂನ್ಗೆ ಕಳುಹಿಸಲಾಗುತ್ತಿತ್ತು. ಇದಲ್ಲದೆ ಮದುವೆಯ ಗಡಿಬಿಡಿಯಲ್ಲಿ ವಧು ವರರಿಗೆ ವಿಶ್ರಾಂತಿ ಅನ್ನೋದೆ ಸಿಗೋದಿಲ್ಲ. ಹೀಗಿರುವಾಗ ಮದುವೆಯ ನಂತರದ ಮಧುಚಂದ್ರವು ವಧು-ವರರಿಗೆ ಅಪಾರ ವಿಶ್ರಾಂತಿಯನ್ನು ಒದಗಿಸುತ್ತದೆ, ಗಡಿಬಿಡಿ, ಟೆನ್ಷನ್ಗಳಿಂದ ದೂರವಾಗಿ, ದಂಪತಿಗಳು ಪರಸ್ಪರ ಸುಂದರ ಸಮಯ ಕಳೆಯಲು ಅವಕಾಶವನ್ನು ಒದಗಿಸುತ್ತದೆ. ಹೀಗೆ ಮಧುಚಂದ್ರವು ದಂಪತಿಗಳನ್ನು ಪರಸ್ಪರ ಅರ್ಥಮಾಡಿಕೊಳ್ಳಲು, ಪ್ರೀತಿ, ನಂಬಿಕೆ ಮತ್ತು ಸಂಬಂಧದ ಮಾಧುರ್ಯವನ್ನು ಹೆಚ್ಚು ಮಾಡಲು ಇರುವಂತಹ ಕೀಲಿಯಾಗಿದೆ.
ಇದನ್ನೂ ಓದಿ: ಸುಡು ಬಿಸಿಲಿನಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ
ನವ ದಂಪತಿಗಳು ಹನಿಮೂನ್ಗೆ ಹೋಗೋದೇಕೆ?
ದಂಪತಿಗಳು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು, ಪರಸ್ಪರ ಪ್ರೀತಿಯನ್ನು ಹಂಚಲು ಹನಿಮೂನ್ಗೆ ಹೋಗುತ್ತಾರೆ. ಅಲ್ಲದೆ ಈ ರೀತಿ ಸುಂದರ ಸ್ಥಳಗಳಿಗೆ ಪ್ರಯಾಣಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ ಮತ್ತು ದಂಪತಿಗಳಿಗೆ ಪರಸ್ಪರ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು, ಭವಿಷ್ಯದ ಬಗ್ಗೆ ಯೋಚಿಸಲು ಅವಕಾಶ ಸಿಗುತ್ತದೆ. ಹನಿಮೂನ್ ಮೂಲಕ ದಂಪತಿಗಳು ಸುಂದರವಾದ ನೆನಪುಗಳನ್ನು ಸೃಷ್ಟಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ