ಬೆಂಗಳೂರು, ಮೇ 7: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನೈಟ್ ಬೀಟ್ ಮಾಡುವ ಪೊಲೀಸ್ ಸಿಬ್ಬಂದಿಗೇ ರಕ್ಷಣೆ ಇಲ್ಲದಂತಾಗಿದೆ. ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಮದ್ಯಪಾನ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ, ಕರ್ತವ್ಯ ನಿರತ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಾಂಶಗಳು
- ಅಮೃತಹಳ್ಳಿ ಠಾಣೆಯ ಕಾನ್ಸ್ಟೆಬಲ್ಗಳಾದ ರುದ್ರಪ್ಪ ಮತ್ತು ಹನುಮಂತು ಅವರ ಮೇಲೆ ಹಲ್ಲೆ.
- ಪಜೇರೋ ಕಾರಿನಲ್ಲಿ ನೈಟ್ ಔಟ್ ಹೊರಟು ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಯುವಕರು.
- ಬಂಧಿತರಲ್ಲಿ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಮತ್ತೊಬ್ಬ ಕಾಲೇಜು ವಿದ್ಯಾರ್ಥಿ.
ನಡುರಸ್ತೆಯಲ್ಲಿ ಅವಾಂತರ
ಮೇ 3ರ ತಡರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಆರ್ಯನ್ ಮತ್ತು ಹರ್ಷಾ ಎಂಬುವವರು ತಮ್ಮ ಇನ್ನಿಬ್ಬರು ಸ್ನೇಹಿತರೊಂದಿಗೆ ಪಜೇರೋ ಕಾರಿನಲ್ಲಿ ನೈಟ್ ಔಟ್ ಹೊರಟಿದ್ದರು. ಅಮೃತಹಳ್ಳಿ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮದ್ಯಪಾನ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ನೈಟ್ ಬೀಟ್ ಸಿಬ್ಬಂದಿ ರುದ್ರಪ್ಪ ಮತ್ತು ಹನುಮಂತು ಇದನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಯುವಕರು ಪೊಲೀಸರ ಮೇಲೆಯೇ ದರ್ಪ ತೋರಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಅತಿಥಿಯಾದ ಕಿಡಿಗೇಡಿಗಳು
ಪೊಲೀಸರ ಮೇಲೆ ಹಲ್ಲೆ ಮಾಡಿದ ಹರ್ಷಾ ಮತ್ತು ಆರ್ಯನ್ನನ್ನು ಅಮೃತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಲ್ಲಿ ಹರ್ಷಾ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಆರ್ಯನ್ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ತಿಳಿಸಿದ್ದಾರೆ. ವಿದ್ಯಾವಂತ ಯುವಕರೇ ಇಂತಹ ಪುಂಡಾಟಿಕೆಯಲ್ಲಿ ತೊಡಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!
ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದು, ಅವರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ನಗರದ ಸುರಕ್ಷತೆ ಕಾಯುವ ಪೊಲೀಸರಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಸುಶಿಕ್ಷಿತರಿಂದಲೇ ಅಪಾಯ ಎದುರಾಗುತ್ತಿರುವುದು ನಾಗರೀಕ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ