ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾದಷ್ಟೇ ಐಷಾರಾಮಿ ಜೀವನಕ್ಕೂ ಹೆಸರಾದ ಈ ದಂಪತಿಗಳ ದಿನದ ಖರ್ಚು ಎಷ್ಟಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಯಾವಾಗಲೂ ಇರುತ್ತದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವಿಘ್ನೇಶ್ ಶಿವನ್ ತಮ್ಮ ಜೀವನಶೈಲಿಯ ವೆಚ್ಚದ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಯನತಾರಾ ಕುಟುಂಬದ ದಿನದ ಖರ್ಚು ಎಷ್ಟು ಎಂಬ ಪ್ರಶ್ನೆಗೆ ವಿಘ್ನೇಶ್ ಶಿವನ್ ನೇರವಾಗಿ ಉತ್ತರಿಸದಿದ್ದರೂ, ಒಂದು ಅಂದಾಜು ಅಂಕಿಅಂಶದ ಮೂಲಕ ಅದರ ಸುಳಿವು ನೀಡಿದ್ದಾರೆ. ‘ಒಬ್ಬ ವ್ಯಕ್ತಿಯ ಬಳಿ 350 ಕೋಟಿ ರೂಪಾಯಿ ಹಣವಿದ್ದರೆ, ಅದಕ್ಕೆ ವಾರ್ಷಿಕವಾಗಿ ಸುಮಾರು 21 ರಿಂದ 24 ಕೋಟಿ ರೂಪಾಯಿ ಬಡ್ಡಿ ಬರುತ್ತದೆ. ಅಂದರೆ ತಿಂಗಳಿಗೆ ಸರಾಸರಿ 2 ಕೋಟಿ ರೂಪಾಯಿ ಅಥವಾ ದಿನಕ್ಕೆ ಅಂದಾಜು 6 ಲಕ್ಷ ರೂಪಾಯಿ ಬಡ್ಡಿಯಾಗುತ್ತದೆ. ಇಷ್ಟು ಮೊತ್ತವಿದ್ದರೆ ಒಂದು ಕುಟುಂಬವು ಅತ್ಯಂತ ಸಂತೋಷದಿಂದ ಮತ್ತು ವೈಭವದಿಂದ ಬದುಕಲು ಸಾಧ್ಯ’ ಎಂದು ಅವರು ವಿವರಿಸಿದ್ದಾರೆ. ಅವರ ಈ ಮಾತಿನಿಂದ ನಯನತಾರಾ ಕುಟುಂಬದ ದೈನಂದಿನ ಜೀವನಕ್ಕೆ ಸರಿಸುಮಾರು 6 ಲಕ್ಷ ರೂಪಾಯಿ ಬೇಕಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ನಯನತಾರಾ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ದಕ್ಷಿಣದ ಕೆಲವೇ ನಟಿಯರ ಬಳಿ ಇರುವಂತೆ ನಯನತಾರಾ ಸ್ವಂತ ಖಾಸಗಿ ವಿಮಾನವನ್ನು ಹೊಂದಿದ್ದಾರೆ ಎನ್ನಲಾಗಿದೆ. ಚೆನ್ನೈನಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ 4 BHK ಅಪಾರ್ಟ್ಮೆಂಟ್ ಮತ್ತು ಹೈದರಾಬಾದ್ ಸೇರಿದಂತೆ ಹಲವು ಕಡೆ ಬಂಗಲೆಗಳನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ‘ದಿ ಲಿಪ್ ಬಾಮ್ ಕಂಪನಿ’ ಎಂಬ ಸೌಂದರ್ಯವರ್ಧಕ ಬ್ರಾಂಡ್ ಮತ್ತು ಚಾಯ್ ವಾಲಾ ಉದ್ಯಮದಲ್ಲಿ ಅವರು ಹೂಡಿಕೆ ಮಾಡಿದ್ದಾರೆ.
ಜೂನ್ 2022ರಲ್ಲಿ ವಿವಾಹವಾದ ಈ ಜೋಡಿ, ಅದೇ ವರ್ಷ ಬಾಡಿಗೆ ತಾಯ್ತನದ (Surrogacy) ಮೂಲಕ ‘ಉಯಿರ್’ ಮತ್ತು ‘ಉಲಗ್’ ಎಂಬ ಅವಳಿ ಪುತ್ರರನ್ನು ಸ್ವಾಗತಿಸಿದರು. ಸಿನಿಮಾದ ವಿಷಯಕ್ಕೆ ಬಂದರೆ, ಶಾರುಖ್ ಖಾನ್ ಅವರ ‘ಜವಾನ್’ ಮೂಲಕ ಬಾಲಿವುಡ್ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು.
ಇದನ್ನೂ ಓದಿ: ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್
ಕೇವಲ ನಟನೆಯಿಂದ ಮಾತ್ರವಲ್ಲದೆ, ತಮ್ಮ ಶಿಸ್ತು ಮತ್ತು ವ್ಯವಹಾರ ಜ್ಞಾನದಿಂದ ನಯನತಾರಾ ಭಾರತದ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:13 am, Fri, 8 May 26