Headlines

‘ಏಕ್ ದಿನ್’ ಸೋಲು, ಪಾತ್ರದ ಬಗ್ಗೆ ಸಾಯಿ ಪಲ್ಲವಿ ನೆಗೆಟಿವ್ ಕಮೆಂಟ್ – Kannada News | Sai Pallavi said she was mis cast in Ek Din movie

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಸ್ಟಾರ್ ನಟಿ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿ ದೊಡ್ಡ ಅಭಿಮಾನಿ ವರ್ಗವನ್ನು ಇಲ್ಲಿ ಹೊಂದಿದ್ದಾರೆ. ಅವರ ನೃತ್ಯ, ನಟನಾ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸದ ಮತ್ತು ಸಿನಿಮಾಗಳನ್ನು ಸಹ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಈ ನಟಿ ಇತ್ತೀಚೆಗೆ ಹಿಂದಿ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಆದರೆ ಸಿನಿಮಾ ಫ್ಲಾಪ್ ಆದ ಬಳಿಕ ಸಾಯಿ ಪಲ್ಲವಿ ನೀಡಿರುವ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸಿರುವ ‘ಏಕ್ ದಿನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಫ್ಲಾಪ್ ಆಗಿದೆ. ಸಿನಿಮಾ ನೋಡಿದವರು ಸಾಯಿ ಪಲ್ಲವಿಯ ಹಿಂದಿಯ ಬಗ್ಗೆ ಟ್ರೋಲ್ ಮಾಡಿದ್ದಾರೆ. ಸಿನಿಮಾಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರತಂಡವು ‘ಏಕ್ ದಿನ್ ಕಿ ಮೆಹಫಿಲ್’ ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಹಿಂದಿ ಭಾಷೆಯಲ್ಲಿ ಮಾತನಾಡಲು ಕಷ್ಟಪಟ್ಟಿದ್ದರು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರು ತೀವ್ರವಾಗಿ ಟ್ರೋಲ್‌ಗೆ ಒಳಗಾಗಿದ್ದರು. ಅಷ್ಟೇ ಅಲ್ಲದೆ, ನಿತೇಶ್ ತಿವಾರಿ ಅವರ ‘ರಾಮಾಯಣ: ಭಾಗ 1’ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಅವರು ಸೂಕ್ತವಲ್ಲ ಎಂದೂ ನೆಟ್ಟಿಗರು ಕಮೆಂಟ್ ಮಾಡಿದ್ದರು. ಈ ಎಲ್ಲಾ ಟೀಕೆಗಳ ಬೆನ್ನಲ್ಲೇ, ಆಮೀರ್ ಖಾನ್ ನಿರ್ಮಾಣದ ‘ಏಕ್ ದಿನ್’ ಚಿತ್ರಕ್ಕೆ ತಾವು ‘ಮಿಸ್‌ಕಾಸ್ಟ್’ (ತಪ್ಪು ಆಯ್ಕೆ) ಎಂದು ಸಾಯಿ ಪಲ್ಲವಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಆಮೀರ್ ಖಾನ್ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಸಾಯಿ ಪಲ್ಲವಿ ಅವರು ಚಿತ್ರದ ಪ್ರೀಮಿಯರ್ ಸಮಯದಲ್ಲಿ ಆಮೀರ್ ಖಾನ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಜುನೈದ್ ಖಾನ್ ಬಳಿ ಹಂಚಿಕೊಂಡಿದ್ದಾರೆ. “ನಾನು ಈ ಪಾತ್ರಕ್ಕೆ ಸರಿಹೊಂದುವುದಿಲ್ಲ ಮತ್ತು ನಾನು ಈ ಚಿತ್ರಕ್ಕೆ ತಪ್ಪು ಆಯ್ಕೆ ಎಂದು ನನಗೆ ಅನ್ನಿಸುತ್ತಿದೆ. ಸ್ವಲ್ಪ ಆಡಂಬರ ಅಥವಾ ಚುರುಕುತನವಿರುವ ಹೊಸಬರು ಈ ಪಾತ್ರ ಮಾಡಬೇಕಿತ್ತು ಎಂದು ನನಗೆ ಅನ್ನಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:‘ಏಕ್ ದಿನ್’ ಶೂಟಿಂಗ್ ಸಮಯದಲ್ಲಿ ಸಾಯಿ ಪಲ್ಲವಿ: ವಿಡಿಯೋ

ತಾವು ಯಾಕೆ ‘ಏಕ್ ದಿನ್’ ಚಿತ್ರವನ್ನು ಒಪ್ಪಿಕೊಂಡೆ ಎಂಬುದನ್ನು ವಿವರಿಸಿದ ಅವರು, ‘ನಾನು ಯಾವಾಗಲೂ ಚಿತ್ರದ ವ್ಯಾಪ್ತಿಯನ್ನು ನೋಡಿ ಸಿನಿಮಾ ಆಯ್ಕೆ ಮಾಡುವುದಿಲ್ಲ. ಆ ಸಮಯದಲ್ಲಿ ನಾನು ಬಹಳಷ್ಟು ಗಂಭೀರವಾದ ಪಾತ್ರಗಳನ್ನು ಮಾಡಿದ್ದೆ, ಆದ್ದರಿಂದ ಮನಸ್ಸಿಗೆ ಹಗುರವೆನಿಸುವ ಪಾತ್ರವನ್ನು ಮಾಡಲು ಬಯಸಿದ್ದೆ. ಚಿತ್ರೀಕರಣದ ಸಮಯದಲ್ಲಿ ಅಥವಾ ನಂತರವೂ ನನ್ನ ಮೇಲೆ ಯಾವುದೇ ಮಾನಸಿಕ ಒತ್ತಡ ಅಥವಾ ಟ್ರೌಮಾ ಇರಬಾರದು ಎಂದುಕೊಂಡಿದ್ದೆ. ಈ ಕಥೆ ಕೇಳಿದಾಗ ಇದು ‘ಬಿಫೋರ್ ಸನ್ ರೈಸ್’ ಹಾಲಿವುಡ್ ಚಿತ್ರದ ಶೈಲಿಯಲ್ಲಿದೆ ಎಂದು ಭಾವಿಸಿ ಒಪ್ಪಿಕೊಂಡೆ’ ಎಂದಿದ್ದಾರೆ. ಆದರೆ ಜುನೈದ್ ಖಾನ್ ಅವರು ಸಾಯಿ ಪಲ್ಲವಿ ಅವರ ಅನುಮಾನಗಳನ್ನು ತಳ್ಳಿಹಾಕಿದ್ದು, ಈ ಪಾತ್ರಕ್ಕೆ ಅವರೇ ಸೂಕ್ತ ಎಂದು ಹೇಳಿದ್ದಾರೆ.

ಸುನಿಲ್ ಪಾಂಡೆ ನಿರ್ದೇಶನದ ಈ ರೋಮ್ಯಾಂಟಿಕ್ ಡ್ರಾಮಾವನ್ನು ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಮೀರ್ ಖಾನ್, ಮನ್ಸೂರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ನಿರ್ಮಿಸಿದ್ದಾರೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 2016ರ ಥಾಯ್ ಚಿತ್ರ ‘ಒನ್ ಡೇ’ ನ ರಿಮೇಕ್ ಆಗಿದ್ದು, ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಆದರೆ ಅದನ್ನು ಹೇಳಿಕೊಳ್ಳಲು ಧೈರ್ಯವಿಲ್ಲದ ಯುವಕನ ಕಥೆಯನ್ನು ಹೊಂದಿದೆ. ಕೇವಲ ಒಂದು ದಿನ ಅವಳೊಂದಿಗೆ ಇರಬೇಕೆಂಬ ಅವನ ಆಸೆ ಅನಿರೀಕ್ಷಿತವಾಗಿ ಈಡೇರುವುದೇ ಚಿತ್ರದ ಕಥಾಹಂದರ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:05 pm, Fri, 8 May 26

Source link

Leave a Reply

Your email address will not be published. Required fields are marked *