Headlines

ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಭೀತಿಯಲ್ಲಿ ಪಂಜಾಬ್; ಸೋಲಿಗೆ ಅಯ್ಯರ್ ದೂರಿದ್ದು ಯಾರನ್ನ? – Kannada News | PBKS Playoff Hopes Dim: Iyer Blames Poor Bowling After Delhi Capitals Defeat

ಧರ್ಮಶಾಲಾದಲ್ಲಿ ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋತಿದೆ. ಆರಂಭದಲ್ಲಿ ಒಂದೇ ಒಂದು ಸೋಲನ್ನು ಕಾಣದೆ ನಾಗಾಲೋಟ ಮುಂದುವರಿಸಿದ್ದ ಈ ತಂಡ ಈಗ ಸತತ ನಾಲ್ಕನೇ ಸೋಲನ್ನು ಕಂಡಿದೆ. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಸೋಲಿಗೆ ತಂಡದ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನವೇ ನೇರ ಕಾರಣ ಎಂದು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಪಂಜಾಬ್, ಪ್ರಿಯಾಂಶ್ ಆರ್ಯ (56) ಮತ್ತು ಶ್ರೇಯಸ್ ಅಯ್ಯರ್ (ಅಜೇಯ 59) ಅವರ ಅಬ್ಬರದ ಆಟದ ನೆರವಿನಿಂದ 210 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಡೆಲ್ಲಿ ತಂಡ ಡೇವಿಡ್ ಮಿಲ್ಲರ್ ಮತ್ತು ಅಕ್ಷರ್ ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಈ ಗುರಿಯನ್ನು 19 ಓವರ್‌ಗಳಲ್ಲೇ ತಲುಪಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 3 ವಿಕೆಟ್‌ಗಳ ಸೋಲು ಅನುಭವಿಸಿದೆ.

ಸೋಲಿನ ಬಳಿಕ ಮಾತನಾಡಿದ ಅಯ್ಯರ್, ‘ನಾನು ಸುತ್ತಿಬಳಸಿ ಮಾತನಾಡಲು ಬಯಸುವುದಿಲ್ಲ. ನಮ್ಮ ಸೋಲಿಗೆ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನವೇ ಕಾರಣ. ಈ ಪಿಚ್‌ನಲ್ಲಿ 210 ರನ್ ಎನ್ನುವುದು
ದೊಡ್ಡ ಮೊತ್ತವೇ. ಪಿಚ್‌ನಲ್ಲಿ ವೇಗಿಗಳಿಗೆ ನೆರವಾಗುವ ರೀತಿ ಇತ್ತು. ಬೌನ್ಸ್ ಕೂಡ ಅಸ್ಥಿರವಾಗಿತ್ತು. ಇಷ್ಟಿದ್ದರೂ ನಾವು ರನ್ ಕಾಯ್ದುಕೊಳ್ಳಲು ವಿಫಲವಾಗಿದ್ದೇವೆ’ ಎಂದರು. ಈ ಮೂಲಕ ಬ್ಯಾಟಿಂಗ್​​ನ ಮೆಚ್ಚಿಕೊಂಡು, ಬೌಲಿಂಗ್​​ ತಂಡವನ್ನು ದೂರಿದ್ದಾರೆ.

ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿ ಯುಜ್ವೇಂದ್ರ ಚಹಲ್ ಅವರನ್ನು ಕಣಕ್ಕಿಳಿಸುವ ಆಲೋಚನೆ ಇತ್ತು ಎಂದು ಅಯ್ಯರ್ ತಿಳಿಸಿದರು. ‘ಪಿಚ್ ವೇಗಿಗಳಿಗೆ ಪೂರಕವಾಗಿದ್ದರಿಂದ ಚಹಲ್ ಅವರನ್ನು ಕರೆತರಲಿಲ್ಲ. ಹಾರ್ಡ್ ಲೆಂತ್‌ನಲ್ಲಿ ಬೌಲಿಂಗ್ ಮಾಡಿದ್ದರೆ ವಿಕೆಟ್ ಪಡೆಯುವ ಅವಕಾಶವಿತ್ತು. ಹೊಸ ಬ್ಯಾಟರ್‌ಗಳು ಬಂದಾಗ ನಿಖರವಾದ ಲೈನ್ ಮತ್ತು ಲೆಂತ್ ಕಾಯ್ದುಕೊಳ್ಳುವುದು ಮುಖ್ಯ. ಆದರೆ ನಾವು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಡೆಲ್ಲಿ ನಾಯಕನ ಸಂತಸ:

ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ತಮ್ಮ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹಿಂದಿನ ಪಂದ್ಯಗಳಲ್ಲಿ ನಾವು ನಿರ್ಣಾಯಕ ಕ್ಷಣಗಳಲ್ಲಿ ಎಡವುತ್ತಿದ್ದೆವು. ಆದರೆ ಈ ಪಂದ್ಯದಲ್ಲಿ ಮಧ್ಯಮ ಓವರ್‌ಗಳಲ್ಲಿ ಮುಖೇಶ್ ಮತ್ತು ಮಾಧವ್ ಅದ್ಭುತವಾಗಿ ಬೌಲಿಂಗ್ ಮಾಡಿ ಪಂದ್ಯವನ್ನು ನಮ್ಮತ್ತ ತಿರುಗಿಸಿದರು. ಬ್ಯಾಟಿಂಗ್‌ನಲ್ಲಿ ಮಿಲ್ಲರ್ ಮತ್ತು ಅಶುತೋಷ್ ಉತ್ತಮ ಸಾಥ್ ನೀಡಿದರು’ ಎಂದು ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 2026 ರ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ಶ್ರೇಯಸ್ ಅಯ್ಯರ್

ಸೋಲಿನ ಭೀತಿ

ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ಈಗ ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಭೀತಿಯಲ್ಲಿದೆ. ಪಂಜಾಬ್​​ಗೆ ಬಾಕಿ ಉಳಿದಿರೋದು ಮೂರು ಪಂದ್ಯಗಳು ಮಾತ್ರ. ಸದ್ಯ 13 ಅಂಕ ಪಡೆದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಸಿಎಸ್​​ಕೆ ಹಾಗೂ ಆರ್​​ಆರ್​ ತಂಡಗಳು 12 ಅಂಕ ಪಡೆದು ಐದು ಹಾಗೂ ಆರನೇ ಸ್ಥಾನದಲ್ಲಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *