Headlines

Rajat Patidar: ಅವರನ್ನು ಹೊಗಳಲು ನನ್ನ ಬಳಿ ಪದಗಳೇ ಇಲ್ಲ..! – Kannada News | Rajat patidar post match interview after rcb vs kkr match

IPL 2026: ಐಪಿಎಲ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಕಳೆದ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿದ್ದ ಆರ್​ಸಿಬಿ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಬೀಗಿದೆ. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ 19.1 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಈ ಗೆಲುವು ಖುಷಿ ನೀಡಿದೆ. ಅಲ್ಲದೆ  ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿರುವುದು ಇಡೀ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಟೂರ್ನಿಯ ಬೇರೆ ಬೇರೆ ಹಂತಗಳಲ್ಲಿ ವಿಭಿನ್ನ ಆಟಗಾರರು ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ತಂಡವು ಮುಂದಿನ ಪಂದ್ಯಗಳ ಬಗ್ಗೆ ಅತಿಯಾದ ಒತ್ತಡ ತೆಗೆದುಕೊಳ್ಳದೆ, “ಒಂದು ಬಾರಿಗೆ ಒಂದು ಪಂದ್ಯ” ಎಂಬ ಸರಳ ಸೂತ್ರವನ್ನು ಪಾಲಿಸುತ್ತಿದೆ ಎಂದಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ಅವರ ಅದ್ಭುತ ಫಾರ್ಮ್ ಬಗ್ಗೆ ಮಾತನಾಡಿದ ನಾಯಕ, “ಅವರ ಆಟವನ್ನು ವರ್ಣಿಸಲು, ಹೊಗಳಲು ನನ್ನ ಬಳಿ ಪದಗಳೇ ಇಲ್ಲ. ಸದಾ ತಂಡಕ್ಕಾಗಿ ದೊಡ್ಡ ಇನಿಂಗ್ಸ್ ಆಡುವುದು ಅವರಿಗೆ ರೂಢಿ” ಎಂದು ಕೊಂಡಾಡಿದ್ದಾರೆ.

ಇದಕ್ಕೂ ಮುನ್ನ ಆರ್​ಸಿಬಿ ಬೌಲರ್​ಗಳು ಸಂಘಟಿತ ದಾಳಿ ನಡೆಸಿದ್ದರು.  ಎದುರಾಳಿ ತಂಡ ಮೊದಲ 10 ಓವರ್‌ಗಳಲ್ಲಿ ಪ್ರತಿ ಓವರ್‌ಗೆ 10-11 ರನ್‌ಗಳ ವೇಗದಲ್ಲಿ ರನ್ ಕದಿಯುತ್ತಿತ್ತು. ಆದರೆ ಆರ್‌ಸಿಬಿ ಬೌಲರ್‌ಗಳು ಕೊನೆಯ 10 ಓವರ್‌ಗಳಲ್ಲಿ ಅದ್ಭುತವಾಗಿ ರನ್ ನಿಯಂತ್ರಿಸಿ, ಎದುರಾಳಿಯನ್ನು 194 ರನ್‌ಗಳಿಗೆ ಕಟ್ಟಿಹಾಕಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಎಂದರು.

ಇದೇ ಪಿಚ್‌ನಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಚೆಂಡು ಅಸಮರ್ಪಕ ಬೌನ್ಸ್ ಆಗುತ್ತಿತ್ತು. ಈ ಪಿಚ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ತಂಡದಲ್ಲಿ ನಾಲ್ಕು ಜನ ವೇಗದ ಬೌಲರ್‌ಗಳನ್ನು ಕಣಕ್ಕಿಳಿಸಿದ ತಂತ್ರ ಯಶಸ್ವಿಯಾಗಿದೆ ಎಂದು ಇದೇ ವೇಳೆ ರಜತ್ ಪಾಟಿದಾರ್ ಹೇಳಿದ್ದಾರೆ.

ಇದನ್ನೂ ಓದಿ: ಭಲೇ ಭೇಷ್… ಕನ್ನಡಿಗನ ಕಮಾಲ್​ಗೆ ದಂಗಾದ ವಿರಾಟ್ ಕೊಹ್ಲಿ!

ಇನ್ನು ಮುಂದಿನ ಗುರಿಗಳ ಬಗ್ಗೆ ಮಾತನಾಡಿದ ರಜತ್,  ಲೀಗ್ ಹಂತದಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಬಾಕಿ ಇವೆ. ಆರ್‌ಸಿಬಿ ತಂಡವು ಮುಂದಿನ ಪಂದ್ಯಕ್ಕಾಗಿ ಧರ್ಮಶಾಲಾಗೆ ಪ್ರಯಾಣಿಸಲಿದೆ. ಧರ್ಮಶಾಲಾ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಪೂರಕವಾಗಿದ್ದು, ಅಲ್ಲಿ ಗೆಲುವಿನ ಲಯ ಮುಂದುವರಿಸಿ, ಆ ಬಳಿಕ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಎದುರಿಸಲು ತಂಡ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಆರ್‌ಸಿಬಿ ತಂಡವು ಬ್ಯಾಟಿಂಗ್, ಬೌಲಿಂಗ್ ಹಾಗೂ ನಾಯಕತ್ವ ಮೂರರಲ್ಲೂ ಅತ್ಯುತ್ತಮ ಸಮತೋಲನ ಕಾಯ್ದುಕೊಂಡಿರುವುದು ಈ ಬಾರಿಯ ಯಶಸ್ಸಿಗೆ ಕಾರಣವಾಗಿದೆ. ನಾಯಕ ರಾಜತ್ ಪಾಟೀದಾರ್ ಅವರ ಸಮಯೋಚಿತ ನಿರ್ಧಾರಗಳು ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಫಾರ್ಮ್ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಇದೇ ಗೆಲುವಿನ ಲಯವನ್ನು ಕಾಯ್ದುಕೊಂಡು, ಪ್ಲೇಆಫ್‌ ಹಂತದಲ್ಲೂ ಆರ್‌ಸಿಬಿ ತನ್ನ ಅಧಿಪತ್ಯವನ್ನು ಮುಂದುವರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *