ತಿರುವನಂತಪುರಂ, ಮೇ 14: 10 ದಿನಗಳ ಕುತೂಹಲ, ಆಂತರಿಕ ಕಲಹ, ಲಾಬಿ, ವಿಪಕ್ಷಗಳ ಟೀಕೆಯ ನಡುವೆ ಕೇರಳಕ್ಕೆ ಕೊನೆಗೂ ಓರ್ವ ನಾಯಕ ಸಿಕ್ಕಿದ್ದಾರೆ. ಕಾಂಗ್ರೆಸ್ ಇಂದು ವಿ.ಡಿ. ಸತೀಶನ್ (VD Satheesan) ಅವರನ್ನು ಕೇರಳ ಸಿಎಂ ಎಂದು ಘೋಷಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯ ಆಯ್ಕೆ ಅಂತಿಮವಾಗಿರಲಿಲ್ಲ. ಕೇರಳದ ಕಾಂಗ್ರೆಸ್ನಲ್ಲೇ ಸತೀಶನ್ ಮತ್ತು ಕೆ.ಸಿ. ವೇಣುಗೋಪಾಲ್ ಬೆಂಬಲಿಗರ ನಡುವೆ ಲಾಬಿ ಶುರುವಾಗಿತ್ತು. ಕಾಂಗ್ರೆಸ್ ಹೈಕಮಾಂಡ್ಗೆ ತೀರಾ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ್ ಅವರೇ ಈ ಬಾರಿ ಸಿಎಂ ಆಗಲಿದ್ದಾರೆ ಎಂಬ ವದಂತಿಗಳ ನಡುವೆಯೂ ಸತೀಶನ್ ತನ್ನ ಬೆಂಬಲಿಗರನ್ನು ಮುಂದಿಟ್ಟುಕೊಂಡು ಸಿಎಂ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ, ಕಾಂಗ್ರೆಸ್ ಗುರುವಾರ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಪಕ್ಷದ ಹೈಕಮಾಂಡ್, ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ನಾಯಕರು ಮತ್ತು ಯುಡಿಎಫ್ ಮಿತ್ರಪಕ್ಷಗಳನ್ನು ಒಳಗೊಂಡ ದೀರ್ಘ ಸುತ್ತಿನ ಚರ್ಚೆಯ ನಂತರ ಸತೀಶನ್ ಅವರ ಹೆಸರು ಘೋಷಿಸಲಾಯಿತು.
ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಕೂಡ ರೇಸ್ನಲ್ಲಿದ್ದರೂ ಹಲವು ರಾಜಕೀಯ ಅಂಶಗಳು ಅಂತಿಮವಾಗಿ ಸತೀಶನ್ ಪರವಾಗಿ ಕೆಲಸ ಮಾಡಿದವು. ಕಳೆದ 5 ವರ್ಷಗಳಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಸರ್ಕಾರದ ವಿರುದ್ಧ ಯುಡಿಎಫ್ ನಡೆಸಿದ ಅಭಿಯಾನದ ಪ್ರಮುಖ ನಾಯಕರಾಗಿದ್ದ ಸತೀಶನ್ ಅವರಿಗೆ ಅದೇ ಪ್ಲಸ್ ಪಾಯಿಂಟ್ ಆಯಿತು. ಅವರನ್ನು ಸಿಎಂ ಆಗಿ ಆಯ್ಕೆ ಮಾಡಲು ಅದೂ ಮುಖ್ಯ ಕಾರಣ.
ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್ ದೇವರನಾಡಿನ ನೂತನ ಮುಖ್ಯಮಂತ್ರಿ
2021ರಿಂದ ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭೆಯ ಒಳಗೆ ಮತ್ತು ಹೊರಗೆ ಪಿಣರಾಯಿ ವಿಜಯನ್ ಸರ್ಕಾರದ ಮೇಲೆ ಕಾಂಗ್ರೆಸ್ ಪರವಾಗಿ ಸತೀಶನ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ, ತಮ್ಮ ಇಮೇಜ್ ಸೃಷ್ಟಿಸಿಕೊಂಡಿದ್ದರು. ಹಾಗೇ, 2026ರ ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸತೀಶನ್ ಭವಿಷ್ಯ ನುಡಿದಿದ್ದರು. ಅದರಂತೆ ಯುಡಿಎಫ್ 102 ಸ್ಥಾನಗಳನ್ನು ಗಳಿಸಿ, ಅದರಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಗಳಿಸಿ ಕೇರಳದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22 ಸ್ಥಾನಗಳನ್ನು ಪಡೆದರೆ, ಕೇರಳ ಕಾಂಗ್ರೆಸ್ (ಜೋಸೆಫ್) 7 ಸ್ಥಾನಗಳನ್ನು ಗೆದ್ದಿದೆ. ಕ್ರಾಂತಿಕಾರಿ ಸಮಾಜವಾದಿ ಪಕ್ಷ ಮೂರು ಸ್ಥಾನಗಳನ್ನು ಮತ್ತು ಕೇರಳ ಕಾಂಗ್ರೆಸ್ (ಜಾಕೋಬ್) 1 ಸ್ಥಾನವನ್ನು ಗೆದ್ದಿದೆ.
ಸತೀಶನ್ ಅವರ ರಾಜಕೀಯ ಪ್ರಯಾಣವು ಕಾಲೇಜು ಕ್ಯಾಂಪಸ್ಗಳಲ್ಲಿಯೇ ಪ್ರಾರಂಭವಾಯಿತು. ಅವರು 1986-87ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆಯಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್ಯುಐ) ಕಾರ್ಯದರ್ಶಿಯಾದರು. ಆರಂಭದಲ್ಲಿಯೇ ನುರಿತ ಸಂಘಟಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರಾಗಿ ಮತ್ತು ನಂತರ ಕೇರಳ ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುವ ಮೂಲಕ ಕಾಂಗ್ರೆಸ್ನೊಳಗಿನ ಅವರ ವೃತ್ತಿಜೀವನವು ಉನ್ನತ ಮಟ್ಟಕ್ಕೆ ಏರಿತು. ಕಾನೂನು ಪದವೀಧರರಾದ ಸತೀಶನ್, ರಾಜಕೀಯಕ್ಕೆ ಸೇರುವ ಮೊದಲು ಕೇರಳ ಹೈಕೋರ್ಟ್ನಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.
ಇದನ್ನೂ ಓದಿ: ಕೇರಳಂ ಸಿಎಂ: ರಾಹುಲ್, ಸೋನಿಯಾ ಗಾಂಧಿ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣಗಳೇನು?
2021ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಭಾರೀ ಸೋಲಿನ ನಂತರ ವಿ.ಡಿ. ಸತೀಶನ್ ವಿರೋಧ ಪಕ್ಷದ ನಾಯಕರಾದರು. ಆದರೆ, ವಿಪಕ್ಷ ನಾಯಕರಾದರೂ ಅವರು ಆಗಿನಿಂದಲೇ ಮತ್ತೆ ಕೇರಳದಲ್ಲಿ ಪಕ್ಷ ಕಟ್ಟುವ ಕೆಲಸ ಶುರು ಮಾಡಿದ್ದರು. ಸತೀಶನ್ ಅವರ ನೆಹರೂ ಅವರ ವಿಚಾರಗಳಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷವನ್ನು ಪುನರ್ನಿರ್ಮಿಸಲು ಬಯಸಿದ್ದರು.
2021ರಲ್ಲಿ ಎಡ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಕತೆ ಮುಗಿಯುತು ಎಂದು ಭಯಪಟ್ಟರು. ಈ ಸೋಲು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಇದರಿಂದಾಗಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಿ, ಆಂತರಿಕ ಹೋರಾಟಗಳಲ್ಲಿ ಸಿಲುಕಿಕೊಂಡಂತೆ ಕಾಣುತ್ತಿತ್ತು. ಆದರೆ, ಸತೀಶನ್ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಪಕ್ಷದ ಚಟುವಟಿಕೆಗಳನ್ನು ಆರಂಭಿಸಿದರು. ಪಕ್ಷದೊಳಗಿನ ಬಣ ರಾಜಕೀಯದಿಂದ ಪಕ್ಷದ ಸಂಘಟನೆಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು.
ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲರಂತಹ ಹಿರಿಯ ನಾಯಕರೊಂದಿಗೆ ಸಂಬಂಧ ಹೊಂದಿರುವ ಗುಂಪುಗಳ ಪ್ರಾಬಲ್ಯವನ್ನು ಸತೀಶನ್ ಬಹಿರಂಗವಾಗಿ ಪ್ರಶ್ನಿಸಿದರು. ಆಂತರಿಕ ಪೈಪೋಟಿಯು ವಿರೋಧ ಪಕ್ಷಗಳಿಗಿಂತ ಕಾಂಗ್ರೆಸ್ಗೆ ಹೆಚ್ಚು ಹಾನಿ ಮಾಡುತ್ತಿದೆ ಎಂದು ಅವರು ವಾದಿಸಿದರು. ಸತೀಶನ್ ಸ್ವತಃ ಯಾವುದೇ ಪ್ರಮುಖ ಕಾಂಗ್ರೆಸ್ ಬಣದ ಭಾಗವಾಗಿರಲಿಲ್ಲ. ಅವರು ಪಕ್ಷದ ಇಮೇಜ್ ಕಟ್ಟುವುದರ ಜೊತೆಗೆ ಪಕ್ಷದೊಳಗೆ ತಮ್ಮ ಇಮೇಜನ್ನು ಗಟ್ಟಿಗೊಳಿಸಿಕೊಳ್ಳುವುದರತ್ತ ಗಮನವಿಟ್ಟಿದ್ದರು. ಅದರ ಪರಿಣಾಮವೇ ಈಗ ಅವರು ಸಿಎಂ ಆಗಿರುವುದು.
ಕೇರಳದಲ್ಲಿ ಕಾಂಗ್ರೆಸ್ ಆಪತ್ತಿನಲ್ಲಿ ಇದ್ದ ಸಂದರ್ಭದಲ್ಲಿ ಆಪದ್ಭಾಂದವನಂತೆ ಬಂದು ಪಕ್ಷವನ್ನು ಕಟ್ಟಿ, ಬೆಳೆಸಿ, ಕಾರ್ಯಕರ್ತರನ್ನು ಒಗ್ಗೂಡಿಸಿದ ಸತೀಶನ್ ಅವರೇ ಸಿಎಂ ಆಗಬೇಕೆಂದು ಅನೇಕ ಕಾರ್ಯಕರ್ತರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಇದೇ ಕಾರಣಕ್ಕೆ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಕಾರ್ಯಕರ್ತರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂದು ಸತೀಶನ್ ಅವರ ಹೆಸರನ್ನೇ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ.
ಕೇರಳದ ರಾಜಕೀಯ ಸಂಸ್ಕೃತಿಯು ಇನ್ನೂ ನೆಹರೂ ಸಮಾಜವಾದದ ಬಲವಾದ ಅಂಶಗಳನ್ನು ಹೊಂದಿದೆ ಎಂಬುದನ್ನು ಸಂಪೂರ್ಣವಾಗಿ ಅರಿತಿದ್ದ ಸತೀಶನ್, ಕಾಂಗ್ರೆಸ್ ಅನ್ನು ನಿಜವಾದ ಎಡಪಂಥೀಯ ಎಂದು ಪದೇ ಪದೇ ಬಿಂಬಿಸಿದರು. ಇದು ಕೆಲವು ಸಾಂಪ್ರದಾಯಿಕ ಎಡಪಂಥೀಯ ಬೆಂಬಲಿಗರಲ್ಲಿಯೂ ಸಹ ಭರವಸೆಯ ಭಾವನೆಯನ್ನು ಮೂಡಿಸಿತು. ಸತೀಶನ್ ವಿರೋಧ ಪಕ್ಷದ ಪ್ರಚಾರದ ವಿಧಾನವನ್ನು ಸಹ ಬದಲಾಯಿಸಿದರು. ಚುನಾವಣಾ ಪ್ರಚಾರದ ವೇಳೆ ಆಯಾ ಭಾಗಗಳಲ್ಲಿ ಇರುವ ಜ್ವಲ.ತ ಸಮಸ್ಯೆಗಳ ಬಗ್ಗೆ ಸತೀಶನ್ ಅವರ ಟೀಂ ಅಧ್ಯಯನ ಮಾಡುತ್ತಿತ್ತು. ನಂತರ ಅದೇ ವಿಷಯವನ್ನು ಅಲ್ಲಿ ಪ್ರಸ್ತಾಪಿಸಿ ಜನರ ಗಮನಸೆಳೆಯುತ್ತಿದ್ದರು. ಚುನಾವಣಾ ಪ್ರಚಾರದ ವೇಳೆ ತಾವು ಮೈಕ್ ಹಿಡಿದು ಭಾಷಣ ಮಾಡುವುದಕ್ಕಿಂತ ಹೆಚ್ಚಾಗಿ ಸತೀಶನ್ ಜನರ ಕಷ್ಟ, ಸಮಸ್ಯೆಗಳನ್ನು ಆಲಿಸಲು ಆದ್ಯತೆ ನೀಡುತ್ತಿದ್ದರು. ಇದು ಆ ಭಾಗದ ಜನರಿಗೆ ಇವ ನಮ್ಮವನು ಎಂಬ ಭಾವನೆ ಮೂಡಿಸುತ್ತಿತ್ತು. ಇದೆಲ್ಲವೂ ಸತೀಶನ್ ಎಂಬ ತಳಮಟ್ಟದ ಕಾರ್ಯಕರ್ತ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಲು ಹಾದಿಯನ್ನು ಸುಗಮಗೊಳಿಸಿದವು ಎನ್ನಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:53 pm, Thu, 14 May 26