Headlines

ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ್ರಾ ನಟ ದಿಲೀಪ್ ರಾಜ್? – Kannada News | Dileep Raj reportedly ignored Chest Pain after Heart Rate shows normal in Smartwatch

ನಟ ದಿಲೀಪ್ ರಾಜ್ (Dileep Raj) ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಹಾಗಿದ್ದರೂ ಕೂಡ ಅವರು ಹೃದಯಾಘಾತದಿಂದ ನಿಧನರಾದರು. ಮೇ 13ರಂದು ದಿಲೀಪ್ ರಾಜ್ ಅವರ ಮರಣದ ಸುದ್ದಿ ಕೇಳಿ ಎಲ್ಲರಿಗೂ ಆಘಾತ ಆಯಿತು. ಫಿಟ್ ಆಗಿದ್ದ ಅವರು 47ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದು ನೋವಿನ ಸಂಗತಿ. ಮೇ 12ರ ರಾತ್ರಿಯೇ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಸ್ಮಾರ್ಟ್ ವಾಚ್ (Smartwatch) ನಂಬಿ ಅವರು ತಪ್ಪು ಮಾಡಿದರು ಎನ್ನಲಾಗಿದೆ.

ಎದೆ ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಹೃದಯಬಡಿತ ಹೇಗಿದೆ ಎಂಬುದನ್ನು ಸ್ಮಾರ್ಟ್ ವಾಚ್ ಮೂಲಕ ದಿಲೀಪ್ ರಾಜ್ ಅವರು ನೋಡಿಕೊಂಡಿದ್ದರು. ಅದರಲ್ಲಿ ಎಲ್ಲವೂ ನಾರ್ಮಲ್ ಎಂದು ತೋರಿಸಿದ್ದರಿಂದ ಅವರು ಸುಮ್ಮನಾಗಿದ್ದಾರೆ. ಮೇ 13ರ ಬೆಳಗ್ಗೆ ವೈದ್ಯರ ಅಪಾಯಿಂಟ್​ಮೆಂಟ್ ತೆಗೆದುಕೊಂಡಿದ್ದರು. ಆದರೆ ಚೆಕಪ್ ಮಾಡಿಸುವುದರೊಳಗೆ ಅವರಿಗೆ ತೀವ್ರ ಹೃದಯಾಘಾತ ಆಯಿತು.

ದಿಲೀಪ್ ರಾಜ್ ಅವರು ಹಾರ್ಟ್ ಬೀಟ್ ಸರಿಯಾಗಿದೆ ಎಂದು ಸ್ಮಾರ್ಟ್ ವಾಚ್ ತೋರಿಸಿದ್ದನ್ನು ನಂಬಿಕೊಂಡು ಸುಮ್ಮನಾಗುವ ಬದಲು, ರಾತ್ರಿಯೇ ವೈದ್ಯರ ಬಳಿ ಹೋಗಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೆ ಅವರು ನಿರ್ಲಕ್ಷ್ಯ ಮಾಡಿದರು. ಅದು ಅವರ ಪ್ರಾಣಕ್ಕೆ ಮುಳುವಾಯಿತು. ದಿಲೀಪ್ ರಾಜ್ ಅಗಲಿಕೆಯಿಂದ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ.

ಆರೋಗ್ಯದ ಕಾಳಜಿ ಇರುವ ಅನೇಕರು ಸ್ಮಾರ್ಟ್ ವಾಚ್ ಬಳಸುತ್ತಾರೆ. ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕ ಮಟ್ಟ, ನಿದ್ರೆಯ ಅವಧಿ, ದೈಹಿಕ ಚುಟುವಟಿಕೆಗಳ ಲೆಕ್ಕ, ದೇಹದ ಉಷ್ಣಾಂಶ ಸೇರಿದಂತೆ ಹಲವು ಬಗೆಯ ಮಾಹಿತಿಯನ್ನು ಸ್ಮಾರ್ಟ್ ವಾಚ್​ಗಳು ನೀಡುತ್ತವೆ. ಆದರೆ ಅವುಗಳು ತೋರಿಸುವ ಮಾಹಿತಿಯನ್ನು ಎಷ್ಟರಮಟ್ಟಿಗೆ ನಂಬಬೇಕು ಎಂಬ ಚರ್ಚೆ ಈಗ ಜೋರಾಗಿದೆ.

ಇದನ್ನೂ ಓದಿ: ‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

ಕಿರುತೆರೆ ಮತ್ತು ಸಿನಿಮಾಗಳಲ್ಲಿ ದಿಲೀಪ್ ರಾಜ್ ಅವರು ಫೇಮಸ್ ಆಗಿದ್ದರು. ನಟನೆ ಮಾತ್ರವಲ್ಲದೇ ಡಬ್ಬಿಂಗ್ ಕಲಾವಿದನಾಗಿ, ಧಾರಾವಾಹಿ ನಿರ್ಮಾಪಕನಾಗಿ ಅವರು ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂಬ ಅಪಾರ ಕನಸು ಕಟ್ಟಿಕೊಂಡಿದ್ದ ಅವರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *