Headlines

ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ – Kannada News | Indian Cargo Ship MV Haji Ali Sinks After Suspected Drone Attack in Omani Waters

ನವದೆಹಲಿ, ಮೇ 15: ಓಮನ್ ಪ್ರಾದೇಶಿಕ ಜಲವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ಭಾರತೀಯ ಸರಕು ಸಾಗಣೆ ನೌಕೆಯ (Indian Ship) ಮೇಲೆ ಶಂಕಿತ ಡ್ರೋನ್ ಅಥವಾ ಕ್ಷಿಪಣಿ ದಾಳಿ ನಡೆದಿದೆ. ಪರಿಣಾಮವಾಗಿ ಹಡಗು ಸಮುದ್ರದಲ್ಲಿ ಮುಳುಗಡೆಯಾಗಿದೆ. ಈ ದಾಳಿಯ ಹಿಂದೆ ಇರಾನ್ (Iran) ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮಾರ್ಚ್ ತಿಂಗಳಿನಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದೀಗ ಹಾರ್ಮುಜ್ ಸುತ್ತಲಿನ ಪ್ರದೇಶವೂ ಸಂಚಾರಕ್ಕೆ ಸುರಕ್ಷಿತವಲ್ಲ ಎಂಬುದು ದೃಢಪಟ್ಟಿದೆ.

ಮುಖ್ಯಾಂಶಗಳು

  • ಮುಳುಗಡೆಯಾದ ಹಡಗನ್ನು ಎಂವಿ ಹಾಜಿ ಅಲಿ (MV Haji Ali) ಎಂದು ಗುರುತಿಸಲಾಗಿದೆ.
  • ಹಡಗು ಸೋಮಾಲಿಯಾದಿಂದ ಶಾರ್ಜಾಕ್ಕೆ ಜಾನುವಾರುಗಳನ್ನು ಸಾಗಿಸುತ್ತಿತ್ತು
  • ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಿಗ್ಬಂಧನ ವಿಧಿಸಿದ ನಂತರ ಅಮೆರಿಕ ನೌಕಾಪಡೆ ಸೂಚಿಸಿದ ಹೊಸ ಸುರಕ್ಷಿತ ಮಾರ್ಗದಲ್ಲಿ ಈ ಹಡಗು ಚಲಿಸುತ್ತಿತ್ತು.

ಸುಮಾರು 57 ಮೀಟರ್ ಉದ್ದವಿರುವ ಎಂವಿ ಹಾಜಿ ಅಲಿ ಹಡಗು ಮೇ 13 ರಂದು ಮುಂಜಾನೆ 3:30 ರ ಸುಮಾರಿಗೆ ಓಮನ್ ಕರಾವಳಿಯ ಲಿಮಾ ಸಮೀಪ ಸಂಚರಿಸುತ್ತಿದ್ದಾಗ ದಾಳಿ ನಡೆದಿದೆ. ಇರಾನ್ ಹಾರ್ಮುಜ್ ಜಲಸಂಧಿಯ ಪ್ರಮುಖ ಮಾರ್ಗಗಳನ್ನು ನಿರ್ಬಂಧಿಸಿದ ನಂತರ, ಹಡಗುಗಳು ಸುರಕ್ಷಿತ ಸಂಚಾರಕ್ಕಾಗಿ ಹೊಸ ಮಾರ್ಗವನ್ನು ಬಳಸುತ್ತಿದ್ದವು. ಆದರೆ, ಕಳೆದ ಹತ್ತು ದಿನಗಳಲ್ಲಿ ಇದೇ ಮಾರ್ಗದಲ್ಲಿ ಐದು ದಾಳಿಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಹಾರ್ಮುಜ್ ಜಲಸಂಧಿಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಘೋಷಿಸಿರುವ ಇರಾನ್

ಇತ್ತೀಚಿನ ದಿನಗಳಲ್ಲಿ ಇರಾನ್ ಹಾರ್ಮುಜ್ ಜಲಸಂಧಿಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದು, ಈ ಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಫೆಬ್ರವರಿ ಅಂತ್ಯದಿಂದ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ, ಇರಾನ್ ಇದುವರೆಗೆ 36ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ಪ್ರತಿದಾಳಿ ನಡೆಸಿದೆ. ಇರಾನ್​ ಐಆರ್​​ಜಿಸಿ ಪಡೆಗಳ ನೂರಾರು ಬೋಟ್​ಗಳು ಈ ಭಾಗದಲ್ಲಿ ಗಸ್ತು ತಿರುಗುತ್ತಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ (ಮೇ 15) ಮೇ 20ರವರೆಗೂ ಐದು ದೇಶಗಳ ವಿದೇಶ ಪ್ರವಾಸ ಕೈಗೊಳ್ತಿದ್ದಾರೆ. ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡಲಿದ್ದು, ಆಯಾ ದೇಶಗಳ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್

ಕೊಲ್ಲಿ ಕಾಳಗದಿಂದಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವ ಬೆನ್ನಲ್ಲೇ ಮೋದಿ, ಯುಎಇ ಭೇಟಿ ಗಮರ್ನಾಹವಾಗಿದೆ. ಭಾರತದ ಇಂಧನ ಸ್ಥಿರತೆ, ದೀರ್ಘಾವಧಿಯ ತೈಲ ಪೂರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಯುಎಇ ಹೂಡಿಕೆ ಖಚಿತಪಡಿಸಿಕೊಳ್ಳಲು ಈ ಭೇಟಿ ನೆರವಾಗಲಿದೆ. ಇನ್ನು, ಯುರೋಪ್ ಜೊತೆ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ, ಗ್ರೀನ್ ಹೈಡ್ರೋಜನ್, ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ, ರಕ್ಷಣಾ ವಲಯದ ಉತ್ಪಾದನೆ ಮತ್ತು ಕ್ಲೀನ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಲು ಯುರೋಪ್ ನಾಯಕರೊಂದಿಗೆ ಮೋದಿ ಚರ್ಚಿಸಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *