ಆಯಿಲ್ ಪೈಪ್ಲೈನ್ ಯೋಜನೆImage Credit source: AI/Mediaforge/TV9
ದುಬೈ, ಮೇ 15: ತೈಲ ರಫ್ತು ವಿಸ್ತರಿಸಲು ಮತ್ತು ಸುಗಮಗೊಳಿಸಲು ಯುಎಇ ದೇಶವು ತನ್ನ ಆಯಿಲ್ ಪೈಪ್ಲೈನ್ ಯೋಜನೆಯ (UAE Oil Pipeline Project) ಕಾರ್ಯಕ್ಕೆ ಚುರುಕು ನೀಡಲು ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ಇರಾನ್-ಅಮೆರಿಕ ಯುದ್ಧದಿಂದಾಗಿ ತಡೆಗೊಂಡಿರುವುದರಿಂದ ತೈಲ ಪೂರೈಕೆಯಲ್ಲಿ ಬಹಳ ವ್ಯತ್ಯಯ ಆಗಿದೆ. ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳ ತೈಲ ರಫ್ತಿಗೆ ಸಂಚಕಾರವಾಗಿದೆ. ಹೀಗಾಗಿ, ತೈಲ ರಫ್ತಿಗೆ ಹಾರ್ಮುಜ್ ಜಲಸಂಧಿಯ ಮೇಲೆ ಅವಲಂಬನೆ ಕಡಿಮೆ ಮಾಡಲು ಯುಎಇಗೆ ಈಗ ಆಯಿಲ್ ಪೈಪ್ಲೈನ್ ಯೋಜನೆ ಒಂದು ಪ್ರಮುಖ ಮಾರ್ಗವಾಗಿದೆ. ಈ ಯೋಜನೆ ಜಾರಿಯನ್ನು ಬೇಗ ಮಾಡಲು ಯುಎಇ ನಿರ್ಧರಿಸಿದೆ.
ಈ ಯೋಜನೆಯನ್ನು ‘ವೆಸ್ಟ್-ಈಸ್ಟ್ ಪೈಪ್ಲೈನ್’ (West-East Pipeline) ಎಂದು ಕರೆಯಲಾಗುತ್ತದೆ. ಒಮನ್ ಕೊಲ್ಲಿಯ ಕರಾವಳಿಯಲ್ಲಿರುವ ಫುಜೈರಾ (Fujairah) ಮೂಲಕ ತೈಲ ರಫ್ತು ಮಾಡುವ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಪೈಪ್ಲೈನ್ ನಿರ್ಮಾಣ ಕಾರ್ಯವು ಈಗಾಗಲೇ ನಡೆಯುತ್ತಿದ್ದು, 2027 ರ ವೇಳೆಗೆ ಇದು ಪೂರ್ಣಗೊಂಡು ಕಾರ್ಯಾಚರಣೆಗೆ ಮುಕ್ತವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಹಾರ್ಮುಜ್ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ
ಈ ಆಯಿಲ್ ಪೈಪ್ಲೈನ್ ಯೋಜನೆಯ ಹಿನ್ನೆಲೆ ಮತ್ತು ಮಹತ್ವ
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಮತ್ತು ಜನನಿಬಿಡ ತೈಲ ಸಾಗಣೆ ಮಾರ್ಗವಾಗಿದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಾಗಣೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಪ್ರಸ್ತುತ ಯುಎಇ ತನ್ನ ಬಹುಪಾಲು ತೈಲವನ್ನು ಹಾರ್ಮುಜ್ ಜಲಸಂಧಿಯ ಮೂಲಕವೇ ರಫ್ತು ಮಾಡುತ್ತದೆ. ಹೊಸ ಪೈಪ್ಲೈನ್ ಪೂರ್ಣಗೊಂಡರೆ, ಜಲಸಂಧಿಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಯುಎಇ ಸುರಕ್ಷಿತವಾಗಿ ತೈಲವನ್ನು ರಫ್ತು ಮಾಡಬಹುದಾಗಿದೆ.
ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಗೆ (ADNOC) ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ
ಪ್ರಸ್ತುತ ಇರುವ ಪೈಪ್ಲೈನ್ ದಿನಕ್ಕೆ ಸುಮಾರು 1.8 ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೊಸ ಪೈಪ್ಲೈನ್ ಬಂದ ನಂತರ ಫುಜೈರಾ ಮೂಲಕ ರಫ್ತು ಸಾಮರ್ಥ್ಯವು ದಿನಕ್ಕೆ 4 ಮಿಲಿಯನ್ ಬ್ಯಾರೆಲ್ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ಈ ಕ್ರಮವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಯುಎಇ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮತ್ತು ಸಂಘರ್ಷದ ಸಮಯದಲ್ಲಿ ತೈಲ ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ